ಕೆಲವು ದಿನಗಳ ಹಿಂದೆ ‘ಫೈಟರ್’ ಚಿತ್ರದ ಬಿಡುಗಡೆಯ ಸಂದರ್ಭದಲ್ಲೇ ಒಂದು ಮಾತು ಹೇಳಿದ್ದರು ವಿನೋದ್ ಪ್ರಭಾಕರ್. ಸದ್ಯದಲ್ಲೇ ಇನ್ನೊಂದು ವಿಭಿನ್ನ ಶೈಲಿಯ ಚಿತ್ರದಲ್ಲಿ ಬರುವುದಾಗಿ ಹೇಳಿದ್ದರು. ಒಂದು ನಿಜವಾಗಿಸುವಂತೆ ಅವರು ‘ನೆಲ್ಸನ್’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಟೀಸರ್ ಇತ್ತೀಚೆಗೆ ನಟ-ನಿರ್ದೇಶಕ ಉಪೇಂದ್ರ ಬಿಡುಗಡೆ ಮಾಡಿದ್ದಾರೆ.
ಟೀಸರ್ ಬಿಡುಗಡೆ ಮಾಡಿ ಮಾತನಾಡಿದ ಉಪೇಂದ್ರ, ‘ಟೈಗರ್ ಹವಾ ಆಗಲೂ ಇತ್ತು ಈಗಲೂ ಇರುತ್ತೇ. ಮುಂದೆಯೂ ಇರುತ್ತದೆ. ನಿಮ್ಮ ತಂದೆ ಸಿನಿಮಾಗೆ ಡೈಲಾಗ್ ಬರೆದಿದ್ದೆ. ಇವತ್ತು ನಿಮ್ಮ ಟೀಸರ್ ಲಾಂಚ್ ಮಾಡಲು ನಿಮ್ಮ ತಂದೆ ಆಶೀರ್ವಾದ ಮಾಡಿದ್ದಾರೆ. ಟೀಸರ್ ಬಗ್ಗೆ ಏನೂ ಹೇಳೋದು? ಎಲ್ಲವೂ ಚೆನ್ನಾಗಿದೆ. ಮೇಕಿಂಗ್, ಗೆಟಪ್ ಸೂಪರ್. ಸಬ್ಜೆಕ್ಟ್ ಬೇರೆ ತರಹ ಇದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.
‘ನೆಲ್ಸನ್’ ಚಿತ್ರವನ್ನು ನಿರ್ದೇಶಿಸುತ್ತಿರುವುದು ನಟ ಅರುಣ್ ಕುಮಾರ್, ‘ಗೊಂಬೆಗಳ ಲವ್’ ಮೂಲಕ ಚಂದನವನಕ್ಕೆ ಕಾಲಿಟ್ಟ ಅರುಣ್, ಆ ನಂತರ ಒಂದಿಷ್ಟು ಚಿತ್ರಗಳಲ್ಲಿ ನಟಿಸಿ, ಈಗ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶಕರಾಗಿದ್ದಾರೆ. ‘ನೆಲ್ಸನ್’ ಚಿತ್ರಕ್ಕೆ ‘ರಕ್ತದಲ್ಲಿ ನೆಂದ ದೇವರಕಾಡು’ ಎಂಬ ಅಡಿಬರಹವಿದೆ.
ಚಾಮರಾಜನಗರ ಜಿಲ್ಲೆಯಲ್ಲಿ 60ರಿಂದ 90ರ ದಶಕದಲ್ಲಿ ನಡೆಯುವ ಗ್ಯಾಂಗ್‌ಸ್ಟರ್ ಕಥೆ ಇರುವ ಸಿನಿಮಾ ನೆಲ್ಸನ್. ‘ಅಲ್ಲಿನ ಭಾಷೆ, ಸಂಸ್ಕೃತಿ, ನೆಲ, ಜಲ, ಬುಡಕಟ್ಟು ಜನಾಂಗದ ಸಂಘರ್ಷ ಸೇರಿದಂತೆ ಒಂದಷ್ಟು ಅಂಶಗಳನ್ನು ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ವಿನೋದ್ ಪ್ರಭಾಕರ್ ಹಿಂದೆಂದೂ ಕಾಣದ ಅವತಾರದಲ್ಲಿ ಈ ಚಿತ್ರದಲ್ಲಿ ಕಾಣಿಸುತ್ತಾರೆ. ಟೀಸರ್ ಚಿತ್ರೀಕರಣ ವೇಳೆ ಅವರು ಕೊಟ್ಟ ಸಹಕಾರ ಮರೆಯಲು ಸಾಧ್ಯವಿಲ್ಲ. ಮೇಕಪ್ ಹಾಕಿಕೊಂಡು ಬಂದು ನಮ್ಮ ಜೊತೆಗೆ ಕುಳಿತವರು, ಬೆಳಿಗ್ಗೆ ಚಿತ್ರೀಕರಣ ಮುಗಿದಾಗಲೇ ಎದ್ದಿದ್ದು. ಅಲ್ಲಿಯವರೆಗೂ ನಮ್ಮ ಜೊತೆಗಿದ್ದರು’ ಎಂದರು.
ವಿನೋದ್ ಪ್ರಭಾಕರ್ ಮಾತನಾಡಿ, ‘ಉಪೇಂದ್ರ ಅಣ್ಣ ಟೀಸರ್ ನೋಡಿ ತುಂಬಾ ಖುಷಿಪಟ್ಟರು. ದರ್ಶನ್ ಸರ್ ಕೂಡ ಟೀಸರ್ ನೋಡಿದರು. ಈ ತರಹದ ಒಂದು ಸಿನಿಮಾ ಮಾಡಲು ಧೈರ್ಯ ಬೇಕು. ನಿರ್ಮಾಪಕ ಶ್ರೀರಾಮ್ ಅವರು ಮೊದಲ ಪ್ರಯತ್ನದಲ್ಲೇ ಇಂಥದ್ದೊಂದು ಚಿತ್ರ ಮಾಡುವ ಧೈರ್ಯ ತೋರಿಸಿದ್ದಾರೆ. ಅರುಣ್ ಕುಮಾರ್ ಪ್ಯಾಷನ್ ಇರುವ ವ್ಯಕ್ತಿ. ಈಗ ಬರೀ ಟೀಸರ್ ಚಿತ್ರೀಕರಣವಾಗಿದೆ. ಸದ್ಯದಲ್ಲೇ ಚಿತ್ರ ಶುರುವಾಗಲಿದೆ’ ಎಂದರು.
‘ನೆಲ್ಸನ್’ ಚಿತ್ರವನ್ನು ಕೋಲಾರದ ಬಿ.ಎಂ. ಶ್ರೀರಾಂ ನಿರ್ಮಿಸುತ್ತಿದ್ದಾರೆ. ಬಿ.ಜೆ. ಭರತ್ ಅವರ ಸಂಗೀತ, ಪ್ರಜ್ವಲ್ ಗೌಡ ಛಾಯಾಗ್ರಹಣವಿದೆ. ಉಳಿದ ಕಲಾವಿದರು ಮತ್ತು ತಂತ್ರಜ್ಞರ ತಂಡವನ್ನು ಸದ್ಯದಲ್ಲೇ ಘೋಷಿಸಲಾಗುವುದು.
ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್
0 Comments