ಯಾರೂ ನಮ್ಮ ಜೊತೆ ಕೆಟ್ಟದಾಗಿ ವರ್ತಿಸಿಲ್ಲ: ಶುಭಾ ಸ್ಪಷ್ಟನೆ

ಸಿನಿ ಸುದ್ದಿ

ಕುದುರೆ ಮುಖ ಸಮೀಪದ ಕಳಸದಲ್ಲಿ ‘ಕೊರಗಜ್ಜ’ ಚಿತ್ರದ ಚಿತ್ರೀಕರಣ ನಡೆಯುವಾಗ ಕೆಲವರು ಗೂಂಡಾಗಳು ದಾಂಧಲೆ ನಡೆಸಿ ಚಿತ್ರೀಕರಣ ನಡೆಸಿದರು, ಚಿತ್ರತಂಡದವರು ಜೊತೆಗೆ ಅನುಚಿತವಾಗಿ ವರ್ತಿಸಿದರು ಎಂದು ನಿರ್ದೇಶಕ ಸುಧೀರ್‍ ಅತ್ತಾವರ್‍ ಆರೋಪಿಸಿದ್ದರು. ಆದರೆ, ಈ ವಿಷಯದಲ್ಲಿ ತಮಗೇನೂ ಗೊತ್ತಿಲ್ಲ ಮತ್ತು ತಮ್ಮ ಜೊತೆಗೆ ಯಾರೂ ಕೆಟ್ಟದಾಗಿ ನಡೆದುಕೊಂಡಿಲ್ಲ ಎಂದು ಶುಭಾ ಪೂಂಜ ಸ್ಪಷ್ಟನೆ ನೀಡಿದ್ದಾರೆ.

‘ಕೊರಗಜ್ಜ’ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದು, ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ಮಧ್ಯೆ, ಚಿತ್ರದ ಹಾಡೊಂದನ್ನು ಕಳಸದಲ್ಲಿ ಕಳೆದ ಎರಡ್ಮೂರು ದಿನಗಳಿಂದ ಚಿತ್ರೀಕರಣ ಮಾಡಲಾಗಿದೆ. ಈ ಹಾಡಿನಲ್ಲಿ ಬಾಲಿವುಡ್‍ನ ಜನಪ್ರಿಯ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಮತ್ತು ಶುಭಾ ಪೂಂಜ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲವರು ಬಂದು ಚಿತ್ರೀಕರಣಕ್ಕೆ ಅಡ್ಡಿ ಮಾಡಿದರು ಎಂದು ನಿರ್ದೇಶಕ ಸುಧೀರ್‍ ಅತ್ತಾವರ್‍ ಇಂದು ಪತ್ರಿಕಾಗೋಷ್ಠಿ ಕರೆದಿದ್ದರು. ಈ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಜೊತೆಗೆ ಶುಭಾ ಪೂಂಜ ಸಹ ಇರುತ್ತಾರೆ ಎಂದು ಹೇಳಿದ್ದರು. ಆದರೆ, ಶುಭಾ ಪೂಂಜ ಈ ಪತ್ರಿಕಾಗೋಷ್ಠಿಗ ಬಂದಿರಲಿಲ್ಲ. ಸುದ್ದಿವಾಹಿನಿಯೊಂದರ ಜೊತೆಗೆ ಈ ಕುರಿತು ಮಾತನಾಡಿರುವ ಶುಭಾ, ತಮ್ಮ ಜೊತೆಗೆ ಯಾರೂ ಅನುಚಿತವಾಗಿ ವರ್ತಿಸಿಲ್ಲ ಎಂದಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ನನಗೆ ಏನಾಯ್ತು ಗೊತ್ತಿಲ್ಲ. ಅಲ್ಲಿ ಎರಡು ದಿನ ಚಿತ್ರೀಕರಣ ಮಾಡಿದ್ದೇವೆ. ಅಂದು ಅರ್ಧ ದಿನ ಚಿತ್ರೀಕರಣವಾದ ಮೇಲೆ, ರಾತ್ರಿ ಚಿತ್ರೀಕರಣ ಬಾಕಿ ಇತ್ತು. ಮಧ್ಯೆ ಬ್ರೇಕ್ ಇತ್ತು. ಆಗ ನಿರ್ದೇಶಕರು ಮತ್ತು ನಿರ್ಮಾಪಕರು ಬಂದು, ನೀವು ಹೊರಟುಬಿಡಿ, ಕಾರು ಬರುತ್ತದೆ ಎಂದು ಹೇಳಿದರು. ನಾವು ಕಾರ್‍ ಹತ್ತಿ ಹೋದೆವು. ನಮಗೇನು ತೊಂದರೆ ಆಗಲಿಲ್ಲ. ಯಾರೂ ಬಂದು ನಮ್ಮನ್ನು ಮಾತನಾಡಿಸಿಲ್ಲ, ಯಾರೂ ನಮ್ಮ ಹತ್ತಿರ ಸಹ ಬಂದಿಲ್ಲ. ಹಾಗಾಗಿ, ಏನಾಯ್ತು ಎಂದು ನನಗೆ ಗೊತ್ತಿಲ್ಲ. ನಮ್ಮ ಜೊತೆಗೆ ಯಾರೂ ಅನುಚಿತವಾಗಿ ವರ್ತಿಸಿಲ್ಲ’ ಎಂದು ಹೇಳಿದ್ದಾರೆ.

ಚಿತ್ರೀಕರಣ ಸಮಯದಲ್ಲಿ ಯಾವುದೇ ಸಮಸ್ಯೆ ಆಗಲಿಲ್ಲ ಎಂದ ಅವರು, ‘ರಾತ್ರಿ ಚಿತ್ರೀಕರಣವಾದ್ದರಿಂದ ರಿಸ್ಕ್ ತೆಗೆದುಕೊಳ್ಳುವುದು ಬೇಡ, ಈ ವಿಷಯ ಬಗೆಹರಿಯಲಿ, ಆ ನಂತರ ಮುಂದುವರೆಸೋಣ ಎಂದು ನಮಗೆ ಹೇಳಿ ಕಳುಹಿಸಿಕೊಟ್ಟರು. ಈ ಸಂದರ್ಭದಲ್ಲಿ ನಾನು, ಗಣೇಶ್‍ ಆಚಾರ್ಯ ಎಲ್ಲರೂ ಜೊತೆಗಿದ್ದೆವು. ನಾವಿಬ್ಬರೂ ಈ ಚಿತ್ರದಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಿದ್ದೇವೆ. ನಾವು ಚಿತ್ರೀಕರಣ ಮಾಡುವಾಗ ಏನೂ ಸಮಸ್ಯೆ ಆಗಲಿಲ್ಲ. ಆ ನಂತರ ಏನಾಯಿತು ಎಂಬುದನ್ನು ನಿರ್ದೇಶಕ ಸುಧೀರ್‍ ಅತ್ತಾವರ್‍ ಅವರೇ ಹೇಳಬೇಕು. ಸ್ಥಳೀಯರ ವಿರೋಧ ಏನು ಅಂತಲೂ ಗೊತ್ತಿಲ್ಲ. ಅದನ್ನು ನಿರ್ದೇಶಕರು ಹೇಳಬೇಕು. ನಾನು ಸಹ ತುಳುನಾಡಿನವಳೇ. ದೈವವನ್ನು ನಂಬುತ್ತೇನೆ. ಸುಧೀರ್‍ ಅತ್ತಾವರ್‍ ಅವರು ಈ ಚಿತ್ರದ ಬಗ್ಗೆ ಹೇಳಿದಾಗ, ಬಹಳ ಖುಷಿಯಿಂದಲೇ ಒಪ್ಪಿಕೊಂಡೆ. ನಮ್ಮ ಭಾಗದ ದೇವರು, ನನ್ನ ಇಷ್ಟವಾದ ದೇವರು ಎಂಬ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸುವುದಕ್ಕೆ ಮುಂದಾದೆ’ ಎಂದಿದ್ದಾರೆ.

ಇನ್ನು, ಪತ್ರಿಕಾಗೋಷ್ಠಿಗೆ ಬಂದಿದ್ದ ಸುಧೀರ್‍ ಅತ್ತಾವರ್‍ ಅವರ ಬಳಿ ಶುಭಾ ಪೂಂಜ ಯಾಕೆ ಬರಲಿಲ್ಲ, ಯಾಕೆ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ ಎಂದು ತಮಗೆ ಗೊತ್ತಿಲ್ಲ ಎಂದಿದ್ದಾರೆ. ಗಲಾಟೆ ನಡೆದ ಕುರಿತು ಸೂಕ್ತ ದಾಖಲೆಗಳನ್ನು ಕೊಡುವುದಾಗಿ ಹೇಳಿದ್ದಾರೆ.

ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್‍

Latest Post

You may also like

0 Comments

Leave a Reply

This site uses Akismet to reduce spam. Learn how your comment data is processed.

%d