ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬಗ್ಗೆ ಚಿತ್ರತಂಡ ಬಹಳ ಖುಷಿಯಾಗಿದೆ. ಆದರೆ, ಇದಕ್ಕೂ ಮೊದಲು ಪರಿಸ್ಥತಿ ಹೀಗಿರಲಿಲ್ಲ. ಕಳೆದ ವಾರ ‘ಘೋಸ್ಟ್’ ಎದುರು ಪರಭಾಷೆಯ ಮೂರು ದೊಡ್ಡ ಚಿತ್ರಗಳು ಪೈಪೋಟಿ ನಡೆಸಿದವು. ತಮಿಳಿನ ‘ಲಿಯೋ’, ತೆಲುಗಿನ ‘ಟೈಗರ್ ನಾಗೇಶ್ವರ್ ರಾವ್’ ಮತ್ತು ‘ಭಗವಂತ್ ಕೇಸರಿ’ ಚಿತ್ರಗಳು ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾದವು. ಇದರಿಂದ ‘ಘೋಸ್ಟ್’ಗೆ ಸಿಗಬೇಕಿದ್ದ ಚಿತ್ರಮಂದಿರಗಳು ಕಡಿಮೆಯಾದವು. ನಿರ್ಮಾಪಕ ಸಂದೇಶ್ ಅವರೇ ಹೇಳಿಕೊಂಡಂತೆ, ಸಾಕಷ್ಟು ಹೋರಾಟ ಮಾಡಿ ಹಲವು ಚಿತ್ರಮಂದಿರಗಳನ್ನು ಉಳಿಸಕೊಳ್ಳಬೇಕಾಯಿತಂತೆ. ಅದರಲ್ಲೂ ಮಲ್ಟಿಪ್ಲೆಕ್ಸ್ಗಳಲ್ಲಿ ‘ಘೋಸ್ಟ್’ಗೆ ಸರಿಯಾದ ಪ್ರಾತಿನಿಧ್ಯ ಸಿಗಲೇ ಇಲ್ಲ.
ಈಗ ಶಿವರಾಜಕುಮಾರ್ ಈ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಇತ್ತೀಚೆಗೆ ನಡೆದ ‘ಘೋಸ್ಟ್’ ಚಿತ್ರದ ಸಂತೋಷಕೂಟದಲ್ಲಿ ಮಾತನಾಡಿರುವ ಅವರು, ಇದೇ ರೀತಿ ಮುಂದುವರೆದರೆ ಮುಂದೆ ಬೇರೆ ರೀತಿಯೇ ಆಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
‘ನಾವು ನಮಗೆ ಜಾಸ್ತಿ ಕೊಡಿ ಅಥವಾ ಅವರಿಗೆ ಕಡಿಮೆ ಕೊಡಿ ಎಂದು ಕೇಳುತ್ತಿಲ್ಲ. ಎಲ್ಲರಿಗೂ ಸಮನಾಗಿ ಕೊಡಿ. ಎಲ್ಲಾ ಭಾಷೆಯ ಚಿತ್ರಗಳಿಗೂ ಕೊಡಿ, ಕನ್ನಡಕ್ಕೆ ಮೊದಲ ಆದ್ಯತೆ ಇರಲಿ. ಈ ವಿಷಯವಾಗಿ ಒಂದು ಬಾರಿ ಮಾತನಾಡಿದ್ದೇನೆ. ಬಹುಶಃ ಅದು ಎಲ್ಲರಿಗೂ ಅರ್ಥವಾಗುತ್ತದೆ ಮತ್ತು ಎಲ್ಲರೂ ಹುಷಾರಾಗಿರುತ್ತಾರೆ ಅಂದುಕೊಂಡಿದ್ದೇನೆ. ಪರಿಸ್ಥಿತಿ ಬದಲಾಗದಿದ್ದರೆ ಮುಂದೆ ಬೇರೆ ರೀತಿಯೇ ಆಗುತ್ತದೆ’ ಎಂದು ಎಚ್ಚರಿಸಿದ್ದಾರೆ.
ಇನ್ನು, ಪರಭಾಷಾ ಚಿತ್ರಗಳಿಗೆ ಕರ್ನಾಟಕದಲ್ಲಿ ದುಬಾರಿ ಟಿಕೆಟ್ ದರ ಇರುವ ಕುರಿತು ಮಾತನಾಡಿರುವ ಅವರು, ‘ಈ ವಿರಷಯದಲ್ಲಿ ಸರ್ಕಾರ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಚಿತ್ರರಂಗದವರು ಎಲ್ಲರೂ ಒಟ್ಟಾಗಿ ಕುಳಿತು ಮಾತನಾಡಿದರೆ ಬಗೆಹರಿಹುತ್ತದೆ. ಟಿಕೆಟ್ ವಿಷಯದಲ್ಲಿ ಯಾವುದೇ ಬೇದಭಾವ ಇರಬಾರದು’ ಎನ್ನುತ್ತಾರೆ.
ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್
0 Comments