ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಬಿಡುಡೆಯಾಗಿ ಒಂದು ವಾರವಾಗಿದೆ. ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ ಗಳಿಕೆ ಸಹ ಜೋರಾಗಿದೆ. ಪರಭಾಷೆಯ ಚಿತ್ರಗಳು ಅಷ್ಟು ಗಳಿಕೆ ಮಾಡಿವೆ, ಇಷ್ಟು ಮಾಡಿವೆ ಎಂದು ದೊಡ್ಡ ಸುದ್ದಿಯಾಗುವ ಹೊತ್ತಿನಲ್ಲಿ ‘ಘೋಸ್ಟ್’ ಈ ಒಂದು ವಾರದಲ್ಲಿ ಎಷ್ಟು ಗಳಿಕೆ ಮಾಡಿದೆ ಎಂದು ಚಿತ್ರತಂಡ ಹೇಳಿಕೊಂಡಿಲ್ಲ. ಇತ್ತೀಚೆಗೆ ನಡೆದ ಚಿತ್ರದ ಪತ್ರಿಕಾಗೋಷ್ಠಿಯಲ್ಲೂ ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಯ ಬಗ್ಗೆ ಚಿತ್ರತಂಡದವರು ಖುಷಿಪಟ್ಟರೇ ಹೊರತು, ಚಿತ್ರ ಈ ಒಂದು ವಾರದಲ್ಲಿ ಎಷ್ಟು ಗಳಿಕೆ ಮಾಡಿದೆ ಎಂಬ ವಿಷಯವನ್ನು ಬಹಿರಂಗಪಡಿಸಲಿಲ್ಲ.
‘ಘೋಸ್ಟ್’ ಚಿತ್ರದ ಮೊದಲ ವಾರದ ಗಳಿಕೆ ಎಷ್ಟು ಎಂಬ ಪ್ರಶ್ನೆಗೆ ಉತ್ತರಿಸುವ ನಿರ್ಮಾಪಕ ಸಂದೇಶ್, ‘ಒಟ್ಟಾರೆ ಗಳಿಕೆ ಇನ್ನೂ ಲೆಕ್ಕ ಹಾಕಿಲ್ಲ. ಈ ವರ್ಷದಲ್ಲಿ ಹಿಟ್ ಆದ ಸಿನಿಮಾಗಳ ಪೈಕಿ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾ ‘ಘೋಸ್ಟ್’. ಬಿಡುಗಡೆಗೆ ಮುನ್ನವೇ ಸೇಫ್ ಆಗಿದ್ದೆ. ಚಿತ್ರಮಂದಿರಗಳಿಂದ ಬರುವುದೆಲ್ಲ ಲಾಭ ಎಂದು ಹೇಳಿದ್ದೆ. ಲಾಭದಲ್ಲಿದ್ದೇನೆ. ಆದರೆ, ಎಷ್ಟು ಲೆಕ್ಕ ಹಾಕಿಲ್ಲ. ಬ್ಯುಸಿನೆಸ್ ಕ್ಲೋಸ್ ಆದ ಮೇಲೆ ಪಕ್ಕಾ ಲೆಕ್ಕ ಹೇಳುತ್ತೇನೆ. ಶಿವರಾಜಕುಮಾರ್ ಅವರ ಜೊತೆಗೆ ಇದು ನಮ್ಮ ಮೂರನೇ ಚಿತ್ರ. ಈ ಹಿಂದಿನ ‘ಚಂದ್ರೋದಯ’ ಮತ್ತು ‘ಅಸುರ’ ಚಿತ್ರಗಳೆರಡೂ ದೊಡ್ಡ ಹಿಟ್ ಆಗಿದ್ದವು. ಈಗ ಈ ಚಿತ್ರ ಸಹ ಯಶಸ್ವಿಯಾಗುವುದರ ಜೊತೆಗೆ ಅವರ ಜೊತೆಗೆ ಹ್ಯಾಟ್ರಿಕ್ ಗೆಲುವು ನೋಡುವಂತಾಗಿದೆ’ ಎನ್ನುತ್ತಾರೆ.
ಇನ್ನು, ಈ ವಿಷಯವಾಗಿ ಮಾತನಾಡುವ ಶಿವರಾಜಕುಮಾರ್, ‘ಹೊಗಳಿಕೆ ಬಿಟ್ಟು ಗಳಿಕೆ ಯಾಕೆ? ಹೊಗಳಿಕೆಯನ್ನು ಮೊದಲು ಎಂಜಾಯ್ ಮಾಡಬೇಕು. ಗಳಿಕೆ ನಂತರ. ಸಿನಿಮಾ ಚೆನ್ನಾಗಿ ಮಾಡಿದ್ದೀವಿ ಎಂದು ಜಗತ್ತು ಹೇಳಿದಾಗ, ಅದು ಮುಖ್ಯವೋ? ಗಳಿಕೆ ಮುಖ್ಯವಾಗುತ್ತದೋ? ಒಟ್ಟಾರೆ ಚಿತ್ರದ ಕಲೆಕ್ಷನ್ ಚೆನ್ನಾಗಿದೆ’ ಎನ್ನುತ್ತಾರೆ.
ಚಿತ್ರತಂಡದವರು ಮೊದಲೇ ಘೋಷಿಸಿದಂತೆ ‘ಘೋಸ್ಟ್’ನ ಮುಂದಿನ ಭಾಗ ಬರುತ್ತದೆ ಮತ್ತು ಮೊದಲ ಚಿತ್ರದಲ್ಲಿ ಕೇಳಿಬಂದ ಹಲವು ಪ್ರಶ್ನೆಗಳಿಗೆ ಈ ಭಾಗದಲ್ಲಿ ಉತ್ತರ ಸಿಗುತ್ತದಂತೆ. ಇದರ ಜೊತೆಗೆ ಚಿತ್ರದಲ್ಲಿ ಬರುವ ದಳವಾಯಿ ಪಾತ್ರವನ್ನು ಇಟ್ಟುಕೊಂಡು ಇನ್ನೊಂದು ಸಿನಿಮಾ ಮಾಡುವ ಬಗ್ಗೆಯೂ ಚಿತ್ರತಂಡಕ್ಕೆ ಯೋಚನೆ ಬಂದಿದೆ.
ಈ ಸಂತೋಷಕೂಟದಲ್ಲಿ ಶಿವರಾಜಕುಮಾರ್ ಮತ್ತು ಸಂದೇಶ್ ಜೊತೆಗೆ ನಿರ್ದೇಶಕ ಶ್ರೀನಿ, ದತ್ತಣ್ಣ ಅಭಿಜಿತ್, ವಿಜಯಲಕ್ಷ್ಮೀ ಸಿಂಗ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಛಾಯಾಗ್ರಾಹಕ ಮಹೇಂದ್ರ ಸಿಂಹ, ಕಲಾ ನಿರ್ದೇಶಕ ಮೋಹನ್ ಬಿ ಕೆರೆ ಸೇರಿದಂತೆ ಹಲವರು ಹಾಜರಿದ್ದು, ಚಿತ್ರ ಗೆದ್ದ ಖುಷಿಯನ್ನು ಹಂಚಿಕೊಂಡರು.
ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್
0 Comments