‘ಇದು ಕದ್ದ ಚಿತ್ರವಲ್ಲ, ಇದನ್ನು ನೋಡಿ ಬೇರೆಯವರು ಕದೀತಾರೆ …’
ಖುಷಿಯಿಂದ ಹೇಳಿಕೊಂಡರು ನಿರ್ದೇಶಕ ಓಂಪ್ರಕಾಶ್ ರಾವ್. ಅವರ ಚಿತ್ರಗಳೆಂದರೆ ಅದು ರೀಮೇಕ್ ಅಥವಾ ರೀಮಿಕ್ಸ್ ಚಿತ್ರವಿರಬಹುದು ಎಂದನಿಸುವುದು ಹೌದು. ಕಾರಣ, ಅವರೇ ಹೇಳುವಂತೆ ಅಂತಹ ಬೆರಕೆ ಸೊಪ್ಪಿನ ಚಿತ್ರಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಮಾಡಿದ್ದಾರೆ. ಈಗ ಈ ಚಿತ್ರ ಸಾಲಿಗೆ ಸೇರಿದ್ದಲ್ಲ ಎನ್ನುತ್ತಾರೆ ಅವರು.
ಅಂದಹಾಗೆ, ‘ಫೀನಿಕ್ಸ್’ ಎಂಬ ಚಿತ್ರವನ್ನು ಶುರು ಮಾಡಿದ್ದಾರೆ ಓಂಪ್ರಕಾಶ್ ರಾವ್. ಗುರುವಾರ ಬೆಳಿಗ್ಗೆ ಈ ಚಿತ್ರದ ಮುಹೂರ್ತ ಬಿನ್ನಿ ಮಿಲ್ ಬಳಿ ಇರುವ ಅಂಗಾಳ ಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿದೆ. ಈ ಚಿತ್ರವನ್ನು ಅವರೇ ನಿರ್ಮಿಸುತ್ತಿದ್ದು, ನಿರ್ಮಾಣದಲ್ಲಿ ವಿತರಕ ವೆಂಕಟ್ ಗೌಡ ಸಹ ಕೈಜೋಡಿಸಿದ್ದಾರೆ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
‘ಫೀನಿಕ್ಸ್’ ಕುರಿತು ಮಾತನಾಡುವ ಓಂಪ್ರಕಾಶ್ ರಾವ್, ‘ಇದೊಂದು ಮಹಿಳಾ ಪ್ರಧಾನ ಚಿತ್ರ. ಮೊದಲ ಬಾರಿಗೆ ನಾನು ಕ್ರೈಮ್ ಥ್ರಿಲ್ಲರ್ ಚಿತ್ರ ಮಾಡುತ್ತಿದ್ದೇನೆ. ನೈಜ ಘಟನೆಗಳನ್ನು ಆಧರಿಸಿದ ಈ ಚಿತ್ರದಲ್ಲಿ ನಿಮಿಕಾ ರತ್ನಾಕರ್, ಕೃತಿಕಾ ಲೋಗೊ, ತನುಷಾ ರಜಪುತ್ ನಟಿಸುತ್ತಿದ್ದಾರೆ. ಭಾಸ್ಕರ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ನಮ್ಮದೇ ಬ್ಯಾನರ್‍ನಡಿ ನಿರ್ಮಿಸುತ್ತಿದ್ದೇವೆ. ಬೆಂಗಳೂರು, ಜರ್ಮನಿ ಹಾಗೂ ಆಸ್ಟ್ರೀಯಾದಲ್ಲಿ ಚಿತ್ರೀಕರಣ ನಡೆಯಲಿದೆ. ಇದು ನನ್ನ ನಿರ್ದೇಶನದ 49ನೇ ಚಿತ್ರ’ ಎಂದು ಮಾಹಿತಿ ನೀಡಿದರು.
ಇದೊಂದು ನೈಜ ಘಟನೆಗಳನ್ನಾಧರಿಸಿದ ಚಿತ್ರ ಎನ್ನುವ ಅವರು, ‘ನನ್ನ ‘ಎಕೆ 47’, ‘ಲಾಕಪ್ ಡೆತ್’ ಚಿತ್ರಗಳ ತರಹ ಇದು ಸಹ ನೈಜ ಘಟನೆಗಳನ್ನಾಧರಿಸಿದ ಚಿತ್ರ. ನಿಜ ಹೇಳಬೇಕೆಂದರೆ, ನನಗೆ ಸ್ವಮೇಕ್ ಚಿತ್ರ ಮಾಡೋಕೆ ಬಿಡುತ್ತಿರಲಿಲ್ಲ. ರೀಮಿಕ್ಸ್ ಮಾಡಿ, ರೀಮೇಕ್ ಮಾಡಿ ಎನ್ನುತ್ತಿದ್ದರು. ಆ ತರಹದ ಚಿತ್ರಗಳನ್ನು ಮಾಡಿ ನನಗೇ ಸಾಕಾಗಿತ್ತು. ಎಷ್ಟು ಅಂತ ನಾನು ಕದಿಯಲಿ? ಇದು ಸ್ಟ್ರೇಟ್ ಚಿತ್ರ. ಇದನ್ನು ನೋಡಿ ಬೇರೆಯವರು ಕದೀತಾರೆ’ ಎನ್ನುತ್ತಾರತೆ ಓಂ.
ನಿಮಿಕಾ ರತ್ನಾಕರ್ ಅವರಿಗೆ ಓಂಪ್ರಕಾಶ್ ರಾವ್ ಜೊತೆಗೆ ಇದು ಮೂರನೆಯ ಚಿತ್ರ. ‘ಚಿತ್ರದ ಶೀರ್ಷಿಕೆ ಕೇಳಿ ನನಗೆ ಈ ಚಿತ್ರದಲ್ಲಿ ನಟಿಸುವ ಆಸೆಯಾಯಿತು. ಕಥೆ ಕೇಳಿದ ಮೇಲಂತೂ ಬಹಳ ಖುಷಿಯಾಯಿತು. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದರು ನಿಮಿಕಾ ರತ್ನಾಕರ್.
ನಟ ಭಾಸ್ಕರ್ ಶೆಟ್ಟಿ ಇದುವರೆಗೂ 90 ಚಿತ್ರಗಳಲ್ಲಿ ನಟಿಸಿದ್ದಾರಂತೆ. ಆದರೆ, ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ಮುಖ್ಯ ಪಾತ್ರ ಸಿಕ್ಕಿರುವುದಾಗಿ ಹೇಳಿದರು. ಮಿಕ್ಕಂತೆ ಚಿತ್ರದಲ್ಲಿ ಕಾಕ್ರೋಜ್ ಸುಧೀ, ವಿನೋದ್ ಕಿನ್ನಿ, ರೋಬೊ ಗಣೇಶ್, ಆರ್ಯನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
‘ಫೀನಿಕ್ಸ್’ ಚಿತ್ರಕ್ಕೆ ಎಂ.ಎಸ್. ರಮೇಶ್ ಸಂಭಾಷಣೆ ಬರೆಯುತ್ತಿದ್ದಾರೆ. ಸಾಧು ಕೋಕಿಲ ಸಂಗೀತ, ರವಿಕುಮಾರ್ ಛಾಯಾಗ್ರಹಣ ಈ ಚಿತ್ರಕ್ಕಿದೆ.
0 Comments