ಚಿತ್ರ ಹಾಗೂ ಧ್ವನಿ (ಭಾಗ – ೨)

World Cinema

ಧ್ವನಿಯ ಬಗ್ಗೆ ಇನ್ನಷ್ಟು ಮಾತನಾಡುವ ಮುಂಚೆ ಒಂದಿಷ್ಟು ಚಿತ್ರಗಳ ಕಡೆಗೆ ಬರೋಣ. ಸಿನೆಮಾದಲ್ಲಿ ಒಂದು ಚಿತ್ರ ಏನನ್ನು ಸಾಧಿಸುತ್ತದೆ? ಕ್ಯಾಮರಾದ ಮುಂದೆ ನಡೆಯುತ್ತಿರುವ ಒಂದು ಘಟನೆಯನ್ನು ಅದು ಪ್ರಾಮಾಣಿಕವಾಗಿ ದಾಖಲಿಸುತ್ತದೆ. ಈ ಪ್ರಾಮಾಣಿಕ ದಾಖಲೀಕರಣ ಎನ್ನುವ ದತ್ತ-ಅಂಶವನ್ನೇ ಬಳಸಿಕೊಂಡು, ಕಥೆಯನ್ನು ಹೇಳಿದಾಗ ಆ ಕಥೆಯ ಬಗ್ಗೆ ನೋಡುಗನಿಗೆ ನಂಬಿಕೆ ಮೂಡುತ್ತದೆ. ಹಾಗಾಗಿ ಸಿನೆಮಾ ಒಂದು ಕಥೆಯನ್ನು ಕೇಳಿದ್ದಕ್ಕಿಂತ ಅಥವಾ ಓದಿದ್ದಕ್ಕಿಂತ ಹೆಚ್ಚು ಖಚಿತವಾದ ಅನುಭವವನ್ನು ಕೊಡುತ್ತದೆ. ಇದು ಒಳ್ಳೆಯದೂ ಹೌದು, ಕೆಟ್ಟದೂ ಹೌದು. (ಇದನ್ನು ಈ ಮಾಧ್ಯಮದ ಗುಣ ಎಂದಷ್ಟೇ ಓದಬೇಕು ಹೊರತು, ಸಿನೆಮಾ ಪುಸ್ತಕಕ್ಕಿಂತ ಒಳ್ಳೆಯದು ಅಥವಾ ಕೆಟ್ಟದು ಎಂಬ ಅರ್ಥಛಾಯೆಗಳನ್ನು ಹುಡುಕಬಾರದು :-)) ಅಂತೆಯೇ ಚಿತ್ರವನ್ನು ನೋಡಿದ ಪ್ರತಿಯೊಬ್ಬನಿಗೂ ಅದು ತೀರಾ ಸರಳ ಎನಿಸುತ್ತದೆ. ಹಾಗಾಗಿಯೇ ಒಂದು ಪುಸ್ತಕವನ್ನು ವಿಮರ್ಷೆ ಮಾಡಿದಷ್ಟು ಕಷ್ಟ ಒಂದು ಚಿತ್ರವನ್ನು ವಿಮರ್ಷಿಸುವುದಲ್ಲ ಎಂಬ ಭಾವನೆಯನ್ನೂ ಮಾಧ್ಯಮದ ಇದೇ ಗುಣ ಉಂಟು ಮಾಡುತ್ತದೆ.

ಅದೆಂತೇ ಇರಲಿ, ಹೀಗೆ ಚಿತ್ರಗಳನ್ನು ಒಂದಕ್ಕೊಂದು ಜೋಡಿಸಿ ಕಥೆಯನ್ನು ಹೇಳಬಹುದು. ಆದರೆ ಕಿವಿಗೆ ಏನು ಆಹಾರ ಒದಗಿಸುತ್ತೀರಿ? ಕತ್ತಲ ಕೋಣೆಯಲ್ಲಿ ಕುಳಿತ ನೋಡುಗನನ್ನು ಸಿನೆಮಾ ತನ್ನ ಬಳಿಗೆ ಕರೆತರಲು, ಪರದೆಯ ಮೇಲಿನ ಚಿತ್ರಗಳಿಗೆ ಸತ್ಯತೆಯ ಸಂಪೂರ್ಣತೆಯನ್ನು ಕೊಡಲು, ಧ್ವನಿಯ ಅಗತ್ಯ ಇದ್ದೇ ಇದೆ ಅಲ್ಲವೇ? ಸರಿ ಇಲ್ಲಿಗೆ ಧ್ವನಿ ಎಂಬುದೂ ಸಿನೆಮಾದ ಒಂದು ಅವಿಭಾಜ್ಯ ಅಂಗ ಯಾಕೆ ಎನ್ನುವಲ್ಲಿಗೆ ಬಂದೆವು. ಭ್ರಮೆಯ ಪರಿಪೂರ್ಣತೆಯನ್ನು ಸಾಧಿಸಲು ಶಬ್ದಗಳು ಹೇಗೆ ಸಹಕರಿಸುತ್ತದೆ ಎಂಬುದನ್ನು ಕೆಲವು ಉದಾಹರಣೆಗಳೊಂದಿಗೆ ನೋಡೋಣ. ಇಲ್ಲಿ ತೆಗೆದುಕೊಳ್ಳುವ ಉದಾಹರಣೆಯ ಚಿತ್ರಗಳು ನೀವು ನೋಡಿರಬಹುದು. ಆದರೆ ನೋಡಿರದವರ ಉಪಯೋಗಕ್ಕಾಗಿ ಚಿತ್ರದ ಬಗ್ಗೆ ಕೊಂಚ ಬರೆಯುತ್ತೇನೆ. (ಈ ಚಿತ್ರಗಳನ್ನು ನೋಡಿದವರು ಸ್ವಲ್ಪ ಸಹಿಸಿಕೊಳ್ಳಿ :-))

ಮೊದಲನೆಯ ಸರಳ ಉದಾಹರಣೆ – ಮೈ ಲೈಫ್ ಆಸ್ ಅ ಡಾಗ್ – ಚಿತ್ರದ್ದು. ಇಲ್ಲಿ ಒಂದು ಪೇಟೆ, ಅಲ್ಲಿನ ಒಬ್ಬ ಹುಡುಗನ ಕಥೆ ಇದು. ಕಥೆಯ ಹೆಚ್ಚಿನ ವಿವರಗಳಿಗೆ ಹೋಗದೆ, ನೇರ ಚಿತ್ರದಲ್ಲಿನ ಧ್ವನಿ ಬಳಕೆಯ ಬಗ್ಗೆ ಮಾತನಾಡೋಣ​. ಚಿತ್ರದುದ್ದಕ್ಕೂ ಆ ಊರಿನಲ್ಲಿನ ಒಬ್ಬ, ತನ್ನ ಮನೆಯ ಸೂರಿನಲ್ಲಿ ಕುಳಿತು ಸೂರಿಗೆ ಮೊಳೆ ಹೊಡೆಯುತ್ತಾ ಅದನ್ನು ರಿಪೇರಿ ಮಾಡುತ್ತಿರುತ್ತಾನೆ. ಊರಿನ ಎಲ್ಲರೂ ಆತನ ಕುರಿತಾಗಿ ಮಾತನಾಡುತ್ತಿರುತ್ತಾರೆ. ಆದರೆ ಆತನನ್ನಾಗಲೀ ಆತನ ಮನೆಯನ್ನಾಗಲೀ ಚಿತ್ರ ಕೊನೆಯ ಹಂತದವರೆಗೂ ತೋರಿಸುವುದೇ ಇಲ್ಲ. ಚಿತ್ರ ಮುಗಿಯುವುದಕ್ಕೆ ಸ್ವಲ್ಪ ಮೊದಲೇ ಮಾತ್ರ ತೋರಿಸುತ್ತಾರೆ. ಇದರಿಂದಾಗಿ ಇಡೀ ಚಿತ್ರದುದ್ದಕ್ಕೂ ಈ ಶಬ್ದದ ಮೂಲದ ಕುರಿತಾದ ಸಣ್ಣಮಟ್ಟಿನ ಕುತೂಹಲ ವೀಕ್ಷಕರಲ್ಲಿ ಇದ್ದೇ ಇರುತ್ತದೆಯಲ್ಲಾ, ನಿರ್ದೇಶಕ ಅದನ್ನೇ ತನ್ನ ಕಥಾನಕದ ಬೆಳವಣಿಗೆಗೆ ಬಳಸುವ ವಿಧಾನ ತುಂಬಾ ಕುತೂಹಲಕಾರಿಯಾಗಿದೆ. ಇಲ್ಲಿ ಮನೆಯ ಸೂರಿಗೆ ಮೊಳೆ ಹೊಡೆಯುವ ಶಬ್ದ ಚಿತ್ರದುದ್ದಕ್ಕೂ ಯಾವುದ್ಯಾವುದೋ ವಿಷಯಗಳಿಗೆ ಪೂರಕವಾಗಿ, ಇನ್ಯಾವುದೋ ದೃಶ್ಯಕ್ಕೆ ಒತ್ತು ನೀಡಲು, ಹಗುರಗೊಳಿಸಲು ಹೀಗೆ ಭಿನ್ನ ಭಿನ್ನ ಅವತಾರಗಳಲ್ಲಿ ಬಳಕೆಯಾಗುತ್ತದೆ. ಇದು ಚಿತ್ರದುದ್ದಕ್ಕೂ ಸಾಧಿತ (Non-Diegetic) ಧ್ವನಿಯೇ ಆಗಿದ್ದು ಕೊನೆಗೆ ಸಾಧ್ಯ (Diegetic) ಶಬ್ದವಾಗುತ್ತದೆ. ಇದು ಒಂದು ಧ್ವನಿ ಸಂಯೋಜನೆಯ ಮೂಲಕ ಕಥೆ ಹೇಳುವ ಪರಿಯ ಪರಿಚಯ.

— ಮುಂದುವರೆಯಲಿದೆ.

-ಅಭಯ ಸಿಂಹ

Latest Post

You may also like

0 Comments

Leave a Reply

This site uses Akismet to reduce spam. Learn how your comment data is processed.

%d