- ಚೇತನ್ ನಾಡಿಗೇರ್
ಕನ್ನಡ ಚಿತ್ರರಂಗದಲ್ಲಿಇತ್ತೀಚಿನ ವರ್ಷಗಳಲ್ಲಿ ಬಹುಬೇಡಿಕೆಯ ಸ್ಟುಡಿಯೋ ಆಗಿದ್ದ ಮಿನರ್ವ ಸ್ಟುಡಿಯೋಸ್‍ಗೆ ಬೀಗ ಬಿದ್ದಿದೆ. ಕಳೆದ ಕೆಲವು ತಿಂಗಳುಗಳಿಂದ ಅಲ್ಲಿ ಚಿತ್ರೀಕರಣ ನಡೆಯುತ್ತಿಲ್ಲ. ಅಲ್ಲಿ ಚಿತ್ರೀಕರಣಗೊಂಡ ಕೊನೆಯ ಕನ್ನಡ ಚಿತ್ರವೆಂದರೆ ಅದು ‘ಘೋಸ್ಟ್’. ಆ ಚಿತ್ರಕ್ಕಾಗಿ ಅಲ್ಲಿ ಜೈಲು ಸೇರಿದಂತೆ ಹಲವು ಸೆಟ್‍ಗಳನ್ನು ನಿರ್ಮಿಸಿ, ಹಲವು ದಿನಗಳ ಕಾಲ ಸತತವಾಗಿ ಚಿತ್ರೀಕರಣ ಮಾಡಲಾಗಿತ್ತು.
‘ನಾವು ಚಿತ್ರೀಕರಣ ಮಾಡುವಾಗಲೇ, ಅಲ್ಲಿ ಕೆಲಸ ಮಾಡುವವರು ಬೇಗ ಮುಗಿಸಿ ಎಂದು ಹೇಳುತ್ತಿದ್ದರು. ಅಷ್ಟರಲ್ಲಾಗಲೇ, ಅಲ್ಲಿ ಚಿತ್ರೀಕರಣ ನಿಲ್ಲಿಸಲು ತೀರ್ಮಾನವಾಗಿತ್ತು. ನಾವು ಸತತವಾಗಿ ಚಿತ್ರೀಕರಣ ಮಾಡುತ್ತಿದ್ದರಿಂದ, ನಮಗೆ ಚಿತ್ರೀಕರಣ ಮುಗಿಸುವುದಕ್ಕೆ ಅವಕಾಶ ಮಾಡಿಕೊಟ್ಟರು. ಬಹುಶಃ ನಮ್ಮದೇ ಅಲ್ಲಿ ಚಿತ್ರೀಕರಣಗೊಂಡ ಕೊನೆಯ ಚಿತ್ರ’ ಎನ್ನುತ್ತಾರೆ ನಿರ್ಮಾಪಕ ಸಂದೇಶ್.
ಕಂಠೀರವ ಸ್ಟುಡಿಯೋ ಗೊತ್ತು, ಅಬ್ಬಯ್ಯ ನಾಯ್ಡು, ಅಭಿಮಾನ್ ಸ್ಟುಡಿಯೋಗಳು ಗೊತ್ತು … ಇದ್ಯಾವುದಿದು ಮಿನರ್ವ ಸ್ಟುಡಿಯೋ ಎಂದು ಆಶ್ಚರ್ಯವಾಗಬಹುದು. ಅದು ಸ್ಟುಡಿಯೋ ಅಲ್ಲ, ಸ್ಟುಡಿಯೋಗಿಂತ ಹೆಚ್ಚಾಗಿದ್ದ ಮಿನರ್ವ ಮಿಲ್ ಇನ್ನು ಕನ್ನಡ ಚಿತ್ರರಂಗಕ್ಕೆ ಲಭ್ಯವಿಲ್ಲ. ಆ ಜಾಗದಲ್ಲಿ ಮುಂದೆ ಏನು ಬರುತ್ತದೋ ಗೊತ್ತಿಲ್ಲ. ಈಗಾಗಲೇ ಅದರ ಸುತ್ತಮುತ್ತ ಬಹುಮಹಡಿ ಅಪಾರ್ಟ್‍ಮೆಂಟ್‍ಗಳು ಮತ್ತು ದೊಡ್ಡ ಮಾಲ್ ಎದ್ದುನಿಂತಿದೆ. ಮುಂದೊಂದು ದಿನ, ಈ ಜಾಗದಲ್ಲೂ ಇನ್ನೊಂದಿಷ್ಟು ಅಪಾರ್ಟ್‍ಮೆಂಟ್‍ಗಳು ಎದ್ದು ನಿಂತರೆ ಅದರಲ್ಲಿ ಆಶ್ಚರ್ಯವೇನಿಲ್ಲ.
ಅಲ್ಲಿಗೆ ಕನ್ನಡ ಚಿತ್ರರಂಗದ್ದೇ ಆಗಿ ಹೋಗಿದ್ದ ಇನ್ನೊಂದು ಮಿಲ್ ಈಗ ಚಿತ್ರರಂಗಕ್ಕೆ ಬಾಗಿಲು ಮುಚ್ಚಿದೆ. ಇಲ್ಲಿ ಚಿತ್ರೀಕರಣಗೊಂಡ ಚಿತ್ರಗಳ ಸಂಖ್ಯೆ ಎಷ್ಟೋ? ಲೆಕ್ಕ ಇಟ್ಟವರಿಲ್ಲ. ‘ಉಗ್ರಂ’, ‘ಕೆಜಿಎಫ್’, ‘ಕಬ್ಜ’, ‘ಘೋಸ್ಟ್’, ‘ಪೊಗರು’, ‘ಅಂಬಿ ನಿನಗೆ ವಯಸ್ಸಾಯ್ತೋ’ ಸೇರಿದಂತೆ ನೂರಾರು ಚಿತ್ರಗಳ ಚಿತ್ರೀಕರಣ ಇಲ್ಲಾಗಿದೆ. ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ಸ್ಟಾರ್ ನಟರು ಇಲ್ಲಿ ಚಿತ್ರೀಕರಣ ಮಾಡಿದ್ದಾರೆ. ಇಲ್ಲಿನ ಧೂಳು, ಕತ್ತಲೆ ತುಂಬಿದ ಫ್ಲೋರ್‍ಗಳಲ್ಲಿ ಹಗಲು-ರಾತ್ರಿ ಎನ್ನದೆ ಕುಣಿದಿದ್ದಾರೆ, ಹೊಡೆದಾಡಿದ್ದಾರೆ ಮತ್ತು ಬಿದ್ದು ಹೊರಳಾಡಿದ್ದಾರೆ. ಜಾಗ ವಿಶಾಲವಾಗಿದ್ದರಿಂದ, ಹಲವು ಕಟ್ಟಡಗಳು ಇದ್ದಿದ್ದರಿಂದ, ಏಕಕಾಲಕ್ಕೆ ಎಷ್ಟೋ ಚಿತ್ರಗಳ ಚಿತ್ರೀಕರಣ ಒಟ್ಟಿಗೆ ಮಾಡಬಹುದಾಗಿತ್ತು. ಊರಿನ ಮಧ್ಯೆ ಇದ್ದರೂ, ಯಾವುದೇ ಗದ್ದಲ-ಗೌಜುಗಳಿಲ್ಲದೆ ಇಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರನಗರಿಗೆ ಎಲ್ಲಿ ಜಾಗ ಕೊಡಬೇಕು ಎಂದು ಸರ್ಕಾರಗಳು ತಲೆ ಕೆಡಿಸಿಕೊಂಡು ಕುಳಿತಿದ್ದರೆ, ಬೇರೆಲ್ಲೂ ಬೇಡ, ಇದೇ ಜಾಗವನ್ನು ಚಿತ್ರನಗರಿ ಮಾಡುವುದಕ್ಕೆ ಕೊಟ್ಟುಬಿಡಿ ಎಂದು ಹೇಳುವಾಸೆ ಚಿತ್ರರಂಗದ ಹಲವರಲ್ಲಿತ್ತು. ಆದರೆ, ತಡವಾಗಿದೆ. ಮಿನರ್ವ ಮಿಲ್ ಅಲಿಯಾಸ್ ಮಿನರ್ವ ಸ್ಟುಡಿಯೋಸ್ ಇನ್ನು ನೆನಪು ಮಾತ್ರ.
ರಾಜ್ಯ ಸರ್ಕಾರ ಚಿತ್ರನಗರಿಗೆ ಯಾವಾಗ ಜಾಗ ಕೊಡುತ್ತದೋ ಗೊತ್ತಿಲ್ಲ. ಕೊಟ್ಟರೂ ಅಲ್ಲಿ ಚಿತ್ರೀಕರಣ ಶುರುವಾಗುವುದಕ್ಕೆ ಇನ್ನೆಷ್ಟು ವರ್ಷಗಳು ಬೇಕು ಎನ್ನುವುದೂ ಗೊತ್ತಿಲ್ಲ. ಬಹುಶಃ ಚಿತ್ರರಂಗದವರು ಸಹ ಈ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಏಕೆಂದರೆ, ಚಿತ್ರರಂಗದವರಿಗೆ ಇದು ಅಭ್ಯಾಸವಾಗಿ ಹೋಗಿದೆ. ಇಲ್ಲಿ ಏನೂ ಆಗುವುದಿಲ್ಲ ಎಂದು ಸ್ಪಷ್ಟವಾಗಿದೆ. ಹಾಗಂತ, ಮೂಲಸೌಕರ್ಯಗಳು ಇಲ್ಲ ಎಂಬ ಕಾರಣಕ್ಕೆ ಸುಮ್ಮನೆ ಕೂರುವುದಕ್ಕೆ ಸಾಧ‍್ಯವೇ? ಏನೇ ಮೂಲಸೌಕರ್ಯಗಳ ಕೊರತೆ ಇದ್ದಾಗಲೂ ಕನ್ನಡ ಚಿತ್ರರಂಗ ಧೃತಿಗೆಡಲಿಲ್ಲ, ಚಿತ್ರಗಳ ಸಂಖ್ಯೆ ಮಾತ್ರ ಕಡಿಮೆಯಾಗಲಿಲ್ಲ ಎಂಬುದು ವಿಶೇಷ.
ಇದ್ದ ಕೆಲವು ಸ್ಟುಡಿಯೋಗಳಿಗೆ ಬೀಗ ಬಿದ್ದು, ಇರುವ ಕೆಲವು ಬೆರಳಣಿಕೆಯ ಸ್ಟುಡಿಯೋಗಳನ್ನು ಕಿರುತೆರೆಯವರು ಆಕ್ರಮಿಸಿಕೊಂಡಾಗ ಮುಂದೇನು ಎನ್ನುತ್ತಿದ್ದ ಕನ್ನಡ ಚಿತ್ರರಂಗಕ್ಕೆ ದೊಡ್ಡ ನೆರವು ನೀಡಿದ್ದು, ಮುಚ್ಚಿಹೋದ ಫ್ಯಾಕ್ಟರಿಗಳು ಮತ್ತು ಮಿಲ್‌ಗಳು. ಬೆಂಗಳೂರು ಒಳಗೆ ಮತ್ತು ಹೊರಗೆ ಒಂದು ಕಾಲಕ್ಕೆ ಹಲವು ಮಿಲ್‍ಗಳು, ಫ್ಯಾಕ್ಟರಿಗಳು ಇದ್ದವು. ಕಾಲಕ್ರಮೇಣ ಅವು ಮುಚ್ಚಿಹೋದವು. ಇಂಥ ಮುಚ್ಚಿಹೋದ ಫ್ಯಾಕ್ಟರಿ ಮತ್ತು ಮಿಲ್‍ಗಳೇ ಇನ್ನೊಂದು ದಿನ ಕನ್ನಡ ಚಿತ್ರರಂಗದ ಸ್ಟುಡಿಯೋಗಳಾದವು. ಇವೆಲ್ಲವೂ ಸುರಕ್ಷಿತ ಜಾಗಗಳಾಗಿದ್ದವು. ಕೆಲಸ ಮಾಡದೇ, ಯಾರೂ ಇಲ್ಲದೆ ಪಾಳು ಬಿದ್ದು ಹೋಗಿದ್ದ ಕಾರಣ ಈ ಫ್ಯಾಕ್ಟರಿಗಳು ಧೂಳು ಹಿಡಿದಿದ್ದವು. ಆದರೆ, ಮಿಕ್ಕಂತೆ ಯಾವುದೇ ಸಮಸ್ಯೆ ಇರಲಿಲ್ಲ. ದೊಡ್ಡ ದೊಡ್ಡ ಕಟ್ಟಡಗಳಾದ್ದರಿಂದ, ಸ್ಟುಡಿಯೋ ತರಹವೇ ಈ ಫ್ಯಾಕ್ಟರಿಗಳು ಕೆಲಸ ನಿರ್ವಹಿಸುತ್ತಿದ್ದವು. ಸಲೀಸಾಗಿ ಎಷ್ಟು ಜನ ಬೇಕಾದರೂ ಚಿತ್ರೀಕರಣ ಮಾಡಬಹುದಿತ್ತು. ಬೇಕಾದ್ದ ಸೆಟ್‍ಗಳನ್ನು ಹಾಕಬಹುದಿತ್ತು. ಹಾಗಾಗಿ, ಚಿತ್ರರಂಗ ಕೊರಗುತ್ತಾ ಕೂರಲಿಲ್ಲ. ಮಾಸ್ಕ್ ಹಾಕಿಕೊಂಡೇ ಚಿತ್ರೀಕರಣ ಸಾಗುತ್ತಿತ್ತು.
ಸುಮಾರು ೨೦ ವರ್ಷಗಳ ಹಿಂದೆ ಮಲ್ಲೇಶ್ವರಂನ ರಾಜ ಮಿಲ್, ಕನ್ನಡ ಚಿತ್ರರಂಗಕ್ಕೆ ದೊಡ್ಡ ಮಟ್ಟದಲ್ಲಿ ಆಶ್ರಯತಾಣವಾಗಿತ್ತು. ರವಿಚಂದ್ರನ್ ಅವರು ತಮ್ಮ ‘ಓ ನನ್ನ ನಲ್ಲೆ’ ಚಿತ್ರಕ್ಕೆ ಇಲ್ಲಿ ಒಂದು ಬಡಾವಣೆಯನ್ನೇ ನಿರ್ಮಿಸಿದ್ದರು. ಆ ನಂತರ ‘ಕೋಟಿಗೊಬ್ಬ’ ಸೇರಿದಂತೆ ಸಾಕಷ್ಟು ಚಿತ್ರಗಳ ಚಿತ್ರೀಕರಣ ಇದೇ ಸ್ಥಳದಲ್ಲಾಗಿತ್ತು. ಆ ನಂತರ ಅಲ್ಲಿದ್ದ ಮಿಲ್ ಕೆಡವಲಾಯಿತು. ಈ ಜಾಗದಲ್ಲಿ ಎದ್ದು ನಿಂತಿರುವುದೇ ಮಂತ್ರಿ ಮಾಲ್. ಇದಲ್ಲದೆ ಬಿನ್ನಿಪೇಟೆಯ ಬಿನ್ನಿ ಮಿಲ್, ಯಶವಂತಪುರ ಬಳಿಯ ಮೈಸೂರ್ ಲ್ಯಾಂಪ್ಸ್, ಮೈಸೂರು ರಸ್ತೆಯ ಟೊರಿನೋ ಫ್ಯಾಕ್ಟರಿ, ಮಿನರ್ವ ಮಿಲ್ಸ್, ಎಚ್.ಎಂ.ಟಿ. ಫ್ಯಾಕ್ಟರಿ … ಇವೆಲ್ಲವೂ ಕನ್ನಡ ಚಿತ್ರರಂಗದ ಪಾಲಿಗೆ ಅಕ್ಷರಶಃ ಸ್ಟುಡಿಯೋಗಳೇ ಆಗಿದ್ದವು. ಇಲ್ಲೆಲ್ಲಾ ಅದೆಷ್ಟು ಚಿತ್ರಗಳ ನಿರ್ಮಾಣವಾಗಿದೆಯೋ ಗೊತ್ತಿಲ್ಲ?
ಒಂದು ಕಡೆ ಪಕ್ಕದ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳ ಸಹಾಯದಿಂದ ದೊಡ್ಡದೊಡ್ಡ ಸ್ಟುಡಿಯೋಗಳು ನಿರ್ಮಾಣವಾದರೆ, ಕನ್ನಡ ಚಿತ್ರರಂಗಕ್ಕೆ ಮಾತ್ರ ಮುಚ್ಚಿಹೋದ, ಪಾಳುಬಿದ್ದ ಫ್ಯಾಕ್ಟರಿಗಳೇ ಕನಸಿನ ಸ್ಟುಡಿಯೋಗಳಾಗಿದ್ದವು. ಈಗ ಅಲ್ಲೂ ಚಿತ್ರೀಕರಣ ಮಾಡುವುದಕ್ಕೆ ಅವಕಾಶಗಳು ಸಿಗುತ್ತಿಲ್ಲ. ಸುಮ್ಮನೆ ಸರ್ಕಾರವು ಅಲ್ಲಿ, ಇಲ್ಲಿ ಎಂದು ಕಣ್ಣಾಮುಚ್ಚಾಲೆ ಆಡುವ ಬದಲು, ಸರ್ಕಾರದ ಒಡೆತನದ ಅಥವಾ ಸ್ವಾಮ್ಯದ ಜಾಗಗಳನ್ನು ಚಿತ್ರರಂಗಕ್ಕೆ ಕೊಟ್ಟರೂ ಅಲ್ಲಿ ಸ್ಟುಡಿಯೋ ಕಟ್ಟಿಕೊಂಡು ಚಿತ್ರೀಕರಣ ಮಾಡಬಹುದು. ಆದರೆ, ಅದಕ್ಕೂ ಮನಸ್ಸು ಮಾಡುತ್ತಿಲ್ಲ. ಇನ್ನು, ಚಿತ್ರರಂಗದವರು ಸಹ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡುತ್ತಿಲ್ಲ. ಇಲ್ಲಿ ಮುಚ್ಚಿದರೆ ಇನ್ನೊಂದು ಕಡೆ ಎಂಬಂತೆ ಸುಮ್ಮನಾಗಿದ್ದಾರೆ.
ಅಲ್ಲಿಗೆ, ಕನ್ನಡ ಚಿತ್ರರಂಗಕ್ಕೆ ಅಂತ ಇರುವುದು ಎಚ್.ಎಂ.ಟಿ ಕಾರ್ಖಾನೆಯೊಂದೇ. ಅಲ್ಲೇನೋ ಹೇರಳವಾಗಿ ಜಾಗಿರುವುದಷ್ಟೇ ಅಲ್ಲ, ಸತತವಾಗಿ ಕನ್ನಡ ಚಿತ್ರಗಳ ಚಿತ್ರೀಕರಣ ಆಗುತ್ತಿದೆ. ಈ ಎಚ್.ಎಂ.ಟಿ ಸ್ಟುಡಿಯೋಸ್‍ಗೂ ಯಾವಾಗ ಬೀಗ ಬೀಳುತ್ತದೋ ಗೊತ್ತಿಲ್ಲ.
ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್
0 Comments