ಮಿಲಿಯನೇರ್‌ಗಳ ಪ್ರಶಸ್ತಿ ಹಾಗೂ ಸ್ಲಮ್ ಡಾಗ್

World Cinema

ವಾಲ್ಟರ್ ಮರ್ಚ್

‘ಸ್ಲಂ ಡಾಗ್ ಮಿಲಿಯನೇರ್’ ಬಗ್ಗೆ ಇದೇ ಬ್ಲಾಗಿನಲ್ಲಿ ಹಿಂದೆ ಬರೆದಿದ್ದ ವಿಶ್ಲೇಷಣೆಯ ಕೆಲವು ಭಾಗಗಳನ್ನು ಮತ್ತೆ ಪರಿಷ್ಕರಿಸಿ, ಒಂದಷ್ಟು ಸೇರಿಸಿ ಒಂದಷ್ಟು ಕಳೆದು ೧ ಮಾರ್ಚ್ ೨೦೦೯ (ಆದಿತ್ಯವಾರದ) ಉದಯವಾಣಿ ಸಾಪ್ತಾಹಿಕ ಪುರವಣಿಗೆ ಬರೆದ ಲೇಖನ ಇದು. ಆಸ್ಕರ್ ಪ್ರಶಸ್ತಿ ಬಂದ ಮುನ್ನೆಲೆಯಲ್ಲಿ ಈ ಲೇಖನ.

ಮೂರು ಬಾರಿ ಆಸ್ಕರ್ ಪಡೆದಿರುವ ವಾಲ್ಟರ್ ಮರ್ಚ್ ಅವರು ಗಾಡ್ ಫಾದರ್ ಎನ್ನುವ ಕ್ಲಾಸಿಕ್ ಸಿನೆಮಾದ ಸಂಕಲನಕಾರರು ಹಾಗೂ ಧ್ವನಿ ಸಂಯೋಜಕರು. ಆ ವ್ಯಕ್ತಿ ತುಂಬಾ ತಿಳುವಳಿಕೆ ಉಳ್ಳವರು, ಸಜ್ಜನ. ಅಜ್ಜ ಮೊಮ್ಮಕ್ಕಳೊಂದಿಗೆ ಕೂರುವಂತೆ ನಮ್ಮೊಂದಿಗೆ ಕುಳಿತು ತಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು, ನಮ್ಮನ್ನು ಪ್ರೋತ್ಸಾಹಿಸುತ್ತಿದ್ದರು. ಮುಂದೆ ಪ್ರಶ್ನೋತ್ತರ ಸಮಯ ಬಂದಾಗ “ಸರ್, ಆಸ್ಕರ್ ಸಿಗುವುದು ಒಂದು ಅವಿಸ್ಮರಣೀಯ ಅನುಭವವಲ್ಲವೇ? ಎಂದು ಕೇಳಿದಾಗ​ ಅವರು ಸಣ್ಣಕೆ ನಕ್ಕರು.
“ಮೊದಲ ಬಾರಿ ನಂಬಲಾರದಷ್ಟು ಸಂತಸವಾಯಿತು. ಎರಡನೇ ಬಾರಿ ಬಹಳ ಸಂತೋಷವಾಯಿತು. ಮೂರನೇ ಬಾರಿ ಸಂತೋಷವಾಯಿತು… ಮತ್ತೆ… ಹ… ಹ್ಹ…”
“ಮತ್ತೆ?! ಏನಾಯ್ತು ಸಾರ್?” ಎಂದು ಕೇಳಿದಾಗ “ಮುಂದಿನ ಬಾರಿ ನಾನು ಆಯ್ಕೆ ಸಮಿತಿಯಲ್ಲಿದ್ದೆ. ಅಲ್ಲಿ ಅವರು – ಇವನಿಗೆ ಕಳೆದ ವರ್ಷ ಕೊಟ್ಟಿದ್ದೇವೆ. ಈ ವರ್ಷ ಬೇಡ. ಅವನು ಪಾಪ ಸುಮಾರು ವರ್ಷಗಳಿಂದ ಕಾಯುತ್ತಿದ್ದಾನೆ. ಅವನಿಗೆ ಕೊಡೋಣ ಹೀಗೆ ಮಾತನಾಡಿಕೊಂಡು ಪ್ರಶಸ್ತಿಗಳನ್ನು ನಿರ್ಧರಿಸುತ್ತಿದ್ದರು. ಇದನ್ನು ಕಂಡು ನನಗೆ ಬಂದ ಪ್ರಶಸ್ತಿಗಳ ಬಗ್ಗೆ ಗೌರವವೇ ಹೋಯಿತು”
ಆಸ್ಕರ್ ಅಂದರೆ ಇಷ್ಟೇನಾ? ಮತ್ತೆ ಯಾಕೆ ನಮ್ಮಲ್ಲಿ ಈ ಆಸ್ಕರ್, ಗೋಲ್ಡನ್ ಗ್ಲೋಬ್ ಬಗ್ಗೆ ಇಷ್ಟೊಂದು ವ್ಯಾಮೋಹ?

ಅಕಾಡಮಿ ಪ್ರಶಸ್ತಿಗಳು ಅಥವಾ ಜನಪ್ರಿಯವಾಗಿ ಕರೆಯುವಂತೆ ಆಸ್ಕರ್ ಪ್ರಶಸ್ತಿಗಳು, ಅಕಾಡಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸ್ (ಎ.ಎಮ್.ಪಿ.ಎ.ಎಸ್) ಮೂಲಕ ವರ್ಷಂಪ್ರತಿ ನಿರ್ದೇಶಕರು, ನಾಟರು, ಬರಹಗಾರರು ಹೀಗೆ ಚಲನಚಿತ್ರರಂಗದ ಕೆಲಸಗಾರರನ್ನು ಪ್ರೋತ್ಸಾಹಿಸಲು ನೀಡಲಾಗುತ್ತದೆ. ಈ ಪ್ರಶಸ್ತಿಯ ಕಲ್ಪನೆ ಮೆಟ್ರೋ ಗೋಲ್ಡ್ವಿನ್ ಮೇಯರ್ ಸ್ಟೂಡಿಯೋದ ಮಾಲಿಕ ಲೂಯಿಸ್ ಬಿ. ಮೇಯರ್‌ರದ್ದು. ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭವನ್ನು ೧೯೨೯ರ ಮೇ ೧೬ರರಂದು ಏರ್ಪಡಿಸಲಾಗಿತ್ತು.

‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರಕ್ಕೆ ಕೊನೆಗೂ ಆಸ್ಕರ್ ಪ್ರಶಸ್ತಿ ಬಂತು! ಭಾರತದ ಎ.ಆರ್. ರೆಹಮಾನ್, ರೆಸುಲ್ ಪೂಕುಟ್ಟಿ ಹಾಗೂ ಗುಲ್ಜಾರರಿಗೆ ಅಕಾಡಮಿ ಪ್ರಶಸ್ತಿ ಒಲಿಯಿತು.

ಮೊದಲಿಗೆ ಅಕಾಡೆಮಿ ಪ್ರಶಸ್ತಿಗೆ ಇಷ್ಟು ಮಹತ್ವ ಏಕೆ? ಏಕೆಂದರೆ ಮೊದಲನೆಯದಾಗಿ ಇದು ಅಮೇರಿಕಾ ನೀಡುವ ಅತ್ಯಂತ ದೊಡ್ಡ ಪ್ರಶಸ್ತಿ! ಸರಿ, ಹಾಗಾದರೆ ಏನು ಎನ್ನುತ್ತೀರಾ? ಹೊರದೇಶದ ಚಿತ್ರಗಳಿಗೆ ಅಲ್ಲಿ ಇರುವುದು ಕೇವಲ ಒಂದು ಪ್ರಶಸ್ತಿ. ಭಾರತೀಯ ಚಿತ್ರರಂಗದಿಂದ ಆ ವಿಭಾಗದಲ್ಲೂ ಪ್ರಶಸ್ತಿಯನ್ನು ಪಡೆದಿಲ್ಲ ಎನ್ನುವುದು ಸತ್ಯವಾದರೂ, ಇಡೀ ಪ್ರಶಸ್ತಿಯಲ್ಲಿ ಕೇವಲ ಒಂದು ವಿಭಾಗಕ್ಕೆ ಭಾರತ ಸಹಿತ ಇತರ ದೇಶಗಳು ಸ್ಪರ್ಧಿಸಲು ಸಾಧ್ಯವಿರುವುದು. ಉಳಿದಂತೆ, ಅಕಾಡೆಮಿ ಪ್ರಶಸ್ತಿಗಳು ಸಂಪೂರ್ಣವಾಗಿ ಅಮೇರಿಕಾದ ಚಿತ್ರಗಳಿಗೆ ಅವರು ಕೊಡುವ ಪ್ರಶಸ್ತಿ. ಇನ್ನು ಅಮೇರಿಕಾದ ಚಿತ್ರರಂಗವನ್ನು ಗಮನಿಸಿ ನೋಡೋಣ. ಅಲ್ಲಿನ ಚಿತ್ರರಂಗ ಸ್ಟೂಡಿಯೋ ಸಿಸ್ಟಮ್ ಮೂಲಕ ನಡೆಯುವಂಥಾದ್ದು. ಅಂದರೆ ಒಂದು ಹತ್ತು ದೊಡ್ಡ ಕಾರ್ಖಾನೆಗಳಿಂದ ಬಂದ ಮಾಲೇ ಇಡೀ ಹಾಲಿವುಡ್. ಅವುಗಳನ್ನು ಬಿಟ್ಟು ಅಮೇರಿಕಾದಲ್ಲಿ ಚಿತ್ರ ನಿರ್ಮಾಣ ಬಹುತೇಕ ಸಾಧ್ಯವೇ ಇಲ್ಲ. ಹಾಗಾಗಿ ಅಲ್ಲಿ ಇಂಡಿಪೆಂಡೆಂಟ್ ಸಿನೆಮಾ ಎನ್ನುವುದನ್ನು ನಾವಿಲ್ಲಿ ಆರ್ಟ್ ಸಿನೆಮಾ ಎನ್ನುವ ಚಿತ್ರಗಳಿಗೆ ಸಮನಾಗಿ ಕಾಣಬಹುದು. ಉಳಿದದ್ದೆಲ್ಲಾ ಮುಖ್ಯವಾಹಿನಿಯ ಚಿತ್ರಗಳೇ. ಹೀಗೆ ಒಂದು ಹತ್ತು ಜನರೇ ಸ್ಪರ್ಧಿಸುತ್ತಿರುವಾಗ ಅಲ್ಲಿನ ಪ್ರಶಸ್ತಿಗಳ ಹಿಂದೆಯೂ ಅವರ ಬೇಕು ಬೇಡಗಳು ನಡೆದೇ ನಡೆಯುತ್ತವೆ. ಭಾರತದಲ್ಲೂ ನಾವು ಈ ಕ್ರಮವನ್ನು ಕಂಡವರೇ. ಇಷ್ಟರಲ್ಲಾಗಲೇ ಆಸ್ಕರ್ ಎಂದರೆ ಅದು ಕೇವಲ ಕಲಾತ್ಮಕ ಹಿರಿಮೆಗೆ ಸಿಗುವ ಗೌರವವಲ್ಲ ಎನ್ನುವ ವಾಸನೆ ಬಂದಿರಬಹುದು.

ಭಾರತ ಇತ್ತೀಚೆಗೆ ಅಕಾಡಮಿ ಪ್ರಶಸ್ತಿಯ ಅತ್ಯಂತ ಸಮೀಪಕ್ಕೆ ಹೋಗಿರುವುದು ಅಮೀರ್ ಖಾನ್ ನಟನೆಯ ‘ಲಗಾನ್’ ಚಿತ್ರದ ಸಂದರ್ಭದಲ್ಲಿ. ಆ ಸಮಯದಲ್ಲಿ ಗಮನವಿಟ್ಟು ಗಮನಿಸಿದ್ದರೆ ನಿಮಗೆ ತಿಳಿಯುತ್ತದೆ. ಅಕಾಡಮಿ ಪ್ರಶಸ್ತಿಯ ನಿರ್ಣಯದ ಸಮಯದಲ್ಲಿ ಚಿತ್ರ ತಂಡ ಅಲ್ಲಿಗೆ ಹೋಗಿ ತಮ್ಮ ಚಿತ್ರದ ಪರ ಪ್ರಚಾರ ಮಾಡಲು ಅಧಿಕೃತ ಅವಕಾಶವಿತ್ತು. ಇಲ್ಲಿಂದ ಅಶುತೋಶ್ ಗೋವರಿಕರ್, ಅಮೀರ್ ಖಾನ್ ಸಹಿತ ಅನೇಕರು ಹೋಗಿ ತಮ್ಮ ಚಿತ್ರದ ಪರವಾಗಿ ಪ್ರಚಾರ ಮಾಡಿ, ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಿ ಪ್ರಶಸ್ತಿಗೆ ಹಕ್ಕುದಾರನಾಗಲು ತಮ್ಮ ಉಮೇದುವಾರಿಕೆಯನ್ನು ತೋರಿಸಿಕೊಂಡಿದ್ದರು. ಇದೆಲ್ಲವೂ ಅಧಿಕೃತವಾಗಿಯೇ ನಡೆದ ವಿಷಯಗಳು. ಅಂದರೆ ಅಲ್ಲಿ ಗುಣಮಟ್ಟಕ್ಕೆ ಬೆಲೆಯೇ ಇಲ್ಲವೇ? ಹಾಗೇನಿಲ್ಲ. ಖಂಡಿತಾ ಪ್ರಶಸ್ತಿ ಗೆಲ್ಲುವ ಚಿತ್ರಗಳು ಗುಣದಲ್ಲಿ ಒಂದು ಮಟ್ಟ ಇರಲೇ ಬೇಕು. ಆದರೆ ಆ ವರುಷ ಬಂದ ಚಿತ್ರಗಳಲ್ಲಿ ನಿಜವಾದ ಅತ್ಯುತ್ತಮ ಚಿತ್ರ ಅದಾಗಿರಬೇಕಿಲ್ಲ.

ಅದಂತಿರಲಿ, ಈಗ ನೇರ ಸ್ಲಂ ಡಾಗ್ ಮಿಲಿಯನೇರ್ ಚಿತ್ರಕ್ಕೇ ಬರೋಣ. ಈ ಚಿತ್ರ ಪ್ರಶಸ್ತಿಗಳನ್ನು ಪಡೆಯಲು ಆರಂಭಿಸುತ್ತಿರುವಾಗ ನಿಧಾನಕ್ಕೆ ಪ್ರಚಾರವನ್ನೂ ಪಡೆಯುತ್ತಾ ಬಂತು. ಚಿತ್ರ ಬಿಡುಗಡೆಯಾಗುವ ಹೊತ್ತಿಗೆ ಅದು ಅನೇಕ ವಿವಾದಗಳಿಗೂ ಗುರಿಯಾಯಿತು. ವಿವಾದ ಏನಿದ್ದರೂ ಭಾರತದಲ್ಲೇ ನಡೆದದ್ದು. ಸ್ಲಂಗಳಲ್ಲಿ ವಾಸಿಸುವವರನ್ನು ‘ನಾಯಿ’ ಎಂದು ಚಿತ್ರ ಕರೆದಿದೆ ಎಂದು ಅನೇಕರು ಬೊಬ್ಬಿಟ್ಟರೆ, ಭಾರತವನ್ನು ಸ್ಲಂಗಳ ದೇಶ ಎಂದು ಚಿತ್ರಿಸಿದ್ದಾರೆ ಎಂದು ಅನೇಕರು ಕೂಗಿಕೊಂಡರು. ಆದರೆ, ಚಿತ್ರದಲ್ಲಿ ತೋರಿಸಿರುವ ಸ್ಲಂಗಳಲ್ಲಿನ ಕಷ್ಟಗಳಿಗಿಂತ ಎಷ್ಟೋ ಹೆಚ್ಚಿನ ದುರ್ಗತಿಯಲ್ಲಿ ನಮ್ಮಲ್ಲಿ ಸ್ಲಂಗಳಲ್ಲಿನ ಜನ ಬದುಕುತ್ತಿರುವುದು ನಿಜವೇ ಆಗಿದೆ. ಚಿತ್ರದಲ್ಲಿ ತೋರಿಸಿರುವ ಪೋಲೀಸ್ ಕ್ರೌರ್ಯವೂ ನಿಜವೇ ಆಗಿದೆ. ಆದರೆ ಇವೆಲ್ಲವುಗಳ ಹೊರತಾಗಿ ಈ ಚಿತ್ರದಲ್ಲಿ ಅನೇಕ ಸಮಸ್ಯೆಗಳಿವೆ.
‘ಸ್ಲಂ ಡಾಗ್ ಮಿಲಿಯನೇರ್’ನಲ್ಲಿ, ಮುಂಬೈಯ ಸ್ಲಂಗಳಲ್ಲಾಡುವ ಅಲ್ಲಿನ ಕೊಚ್ಚೆಯಲ್ಲಿ ಈಜು ಹೊಡೆಯುವ ಪೋರನೊಬ್ಬ ‘ಹೂ ವಾಂಟ್ಸ್ ಟು ಬಿ ಅ ಮಿಲಿಯನೇರ್’ (ಇದರ ಭಾರತೀಯ ಅವತಾರವೇ ಕೌನ್ ಬನೇಗಾ ಕರೋಡ್ ಪತಿ) ಎಂಬ ಟೆಲಿವಿಷನ್ ಆಟದಲ್ಲಿ ಆಡಿ ಗೆಲ್ಲುವ ಕಥೆ ಇದೆ. ಇದು ಕಥೆಯ ಬೆನ್ನುಹುರಿ ಎನ್ನಬಹುದು. ಆ ಆಟದಲ್ಲಿ ಕೇಳುವ ಪ್ರತಿಯೊಂದು ಪ್ರಶ್ನೆಯೂ ಪರಸ್ಪರ ಸಂಬಂಧವಿಲ್ಲದವುಗಳಾದರೂ, ಹೇಗೆ ಆ ಸಂಗತಿಗಳು ವಿಚಿತ್ರ ಕಾರಣಗಳಿಂದಾಗಿ ಈ ಸ್ಲಂ-ಬಾಲಕನಿಗೆ ತಿಳಿಯಿತು ಎನ್ನುವುದು ಚಿತ್ರದ ಜೀವಾಳ. ಇಲ್ಲಿ ಸ್ಲಮ್ ಜೀವನದ ನಿಗೂಢ ಮಗ್ಗುಲುಗಳನ್ನು ಪರಿಚಯಿಸುತ್ತಲೇ ಜೀವನದಲ್ಲಿ ಒಂದು ಆಸೆಯನ್ನು ಹುಟ್ಟಿಸುವ ಪ್ರಯತ್ನ ನಡೆಯುತ್ತದೆ. ಕನಸುಗಳೇ ಇಲ್ಲದ ಸ್ಥಳದಲ್ಲಿ ಹುಟ್ಟಿ ನಾಯಿ ಸಮಾನ ಜೀವನವನ್ನು ನಡೆಸುತ್ತಿರುವವನೊಬ್ಬನ ಯಶೋಗಾಥೆ ಇದು.

ಆದರೆ ಚಿತ್ರದ ಕಥೆಯು ಒಟ್ಟಾರೆಯಾಗಿ ಒಂದು ಕಾಲ್ಪನಿಕ ಜಗತ್ತಿನಲ್ಲಿ ನಡೆಯುತ್ತದೆ. ಭಾರತೀಯರಾದ ನಾವು, ನಂಬಲಾರದ ವಿಷಯಗಳು ಈ ಚಿತ್ರದ ಕಥೆಗೆ ತಿರುವುಗಳನ್ನು ಕೊಡುವಲ್ಲಿ ಗಮನಾರ್ಹ ಭಾಗಗಳಾಗಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಕಥೆಯಲ್ಲಿ ಮೂಲಭೂತ ದೋಷಗಳು ಅನೇಕ ಇವೆ. ಮೊದಲನೆಯದಾಗಿ ‘ಕೋನ್ ಬನೇಗಾ ಕರೋಡ್ ಪತಿ’ ಎಂಬ ಆಟದಲ್ಲಿ ಈ ಹುಡುಗ ಆಡುತ್ತಿರುತ್ತಾನೆ. ಅದನ್ನು ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿರುತ್ತಾರೆ. ಆದರೆ ನಿಜಜೀವನದಲ್ಲಿ ಈ ಆಟವು ಎಂದೂ ನೇರ ಪ್ರಸಾರದಲ್ಲಿ ನಡೆಯುವುದೇ ಇಲ್ಲ. ಅವೆಲ್ಲವೂ ಮೊದಲೇ ಚಿತ್ರೀಕರಿಸಿಕೊಂಡು ತೋರಿಸಲ್ಪಡುವ ಕಾರ್ಯಕ್ರಮಗಳು. ಈ ಗೇಮ್ ಶೋ ಪ್ರಪಂಚದ ಸುಮಾರು ೬೪ ದೇಶಗಳಲ್ಲಿ ಯಶಸ್ವಿಯಾಗಿ ನಡೆದಿದೆಯಂತೆ! ಎಲ್ಲೂ ನೇರಪ್ರಸಾರ ನಡೆದಿಲ್ಲ! ಇಲ್ಲಿಗೆ ಚಿತ್ರದಲ್ಲಿ ಕುತೂಹಲ ಕೆರಳಿಸಲು ಬಳಸಿರುವ ಅತಿ ದೊಡ್ಡ ಪರಿಕರವೇ ಸುಳ್ಳು ಎಂದಂತಾಗುತ್ತದೆ. ಅದಂತಿರಲಿ, ಅದನ್ನು ಕವಿಸಮಯ ಎಂದು ಕ್ಷಮಿಸಬಹುದು ಎನ್ನುತ್ತೀರೇ? ತೊಂದರೆಯೆಂದರೆ ಇಂಥಾ ಕವಿಸಮಯದ ಬಳಕೆ ಚಿತ್ರದುದ್ದಕ್ಕೂ ಢಾಳಾಗಿದ್ದು ಕಥೆಯನ್ನು ನಂಬುವುದೇ ಕಷ್ಟವಾಗುತ್ತದೆ. ಆದರೆ ಹೇಳಹೊರಟಿರುವ ಕಥೆ ವಾಸ್ತವದ ಹತ್ತಿರದ್ದು ಎನ್ನುವ ಪ್ರಯತ್ನವನ್ನು ಚಿತ್ರ ಮಾಡುತ್ತದೆ.

ಇನ್ನು ಚಿತ್ರದ ಮತ್ತೊಂದು ಪ್ರಮುಖ ತೊಂದರೆಯೆಂದರೆ ಭಾಷೆ. ಹಿಂದಿಯಲ್ಲಿ ರಾಮಾಯಣ ಪ್ರಸಾರವಾಗುವಾಗ “ರಾಮನ ಕಾಲದವರು ಹಿಂದಿಯಲ್ಲಿ ಸಂಭಾಷಿಸುತ್ತಿದ್ದರೇ?” ಎಂದು ಕುಹಕವಾಡಿದವರಿದ್ದರು. ಯಕ್ಷಗಾನದಲ್ಲಿ ದೇವೇಂದ್ರನೂ ಕನ್ನಡದಲ್ಲಿ ಮಾತನಾಡುತ್ತಾನೆ. ಇಲ್ಲೆಲ್ಲೂ ತೊಂದರೆ ಕೊಡದ ಭಾಷೆ ನಮಗೆ ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದಲ್ಲಿ ತೊಂದರೆ ಕೊಡುತ್ತದೆ. ಬಹುಷಃ ಎಲ್ಲಾ ಪಾತ್ರಗಳು ಒಂದೇ ರೀತಿಯಲ್ಲಿ ಇಂಗ್ಲೀಷಿನಲ್ಲಿ ಮಾತನಾಡಿದ್ದರೂ ನಮಗೆ ಈ ತೊಂದರೆ ಆಗುತ್ತಿರಲಿಲ್ಲ. ಆದರೆ ಇಲ್ಲಿ ಕೆಲವು ಪಾತ್ರಗಳು ಹಿಂದಿಯಲ್ಲಿ ಮಾತನಾಡುತ್ತವೆ. ಮತ್ತೆ ಕೆಲವು ಭಾರತೀಯ ಇಂಗ್ಲೀಷಿನಲ್ಲಿ ಮಾತನಾಡುತ್ತವೆ. ಹಾಗೂ ಮತ್ತೆ ಕೆಲವು ಪಾತ್ರಗಳು ಅಚ್ಚ  ಬ್ರಿಟೀಷ್ ಇಂಗ್ಲೀಷಿನಲ್ಲಿ ಮಾತನಾಡುತ್ತವೆ. ತಮಾಶೆಯೆಂದರೆ, ಚಿತ್ರದಲ್ಲಿ ಬರುವ ಯಾವುದೇ ಪಾತ್ರಕ್ಕೂ ನಿಜವಾಗಿ ಇಂಗ್ಲೀಷ್ ಮಾತೃಭಾಷೆಯಾಗಿರುವುದೇ ಇಲ್ಲ! ಪಾತ್ರಗಳು ನಮ್ಮ ಸುತ್ತ ಮುತ್ತಲಿನವೇ ಆಗಿದ್ದರೂ ಅವುಗಳ ಮಾತು, ಹಾವ-ಭಾವಗಳಿಂದಾಗಿ ಭಾರತದಲ್ಲಿ ಚಿತ್ರೀಕರಿಸಿರುವ ಯಾವುದೋ ಅಮೇರಿಕನ್ ಚಿತ್ರದಂತೆ ಭಾಸವಾಗುತ್ತದೆ. ಇದರಿಂದಾಗಿ ಚಿತ್ರದಲ್ಲಿ ಮನಸ್ಸು ಕೂರುವುದೇ ಇಲ್ಲ.

ಚಿತ್ರದಲ್ಲಿ ಹುಡುಗನಿಗೆ ಅವನ ಬಾಲ್ಯದ ಘಟನಾವಳಿಗಳಿಂದಾಗಿ ‘ಹೂ ವಾಂಟ್ಸ್ ಟು ಬಿ ಅ ಮಿಲಿಯನೇರ್’ ಆಟದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿರುತ್ತವೆ ಎಂದು ಚಿತ್ರ ನಮ್ಮನ್ನು ನಂಬಿಸಲು ಪ್ರಯತ್ನಿಸುತ್ತದೆ. ಆದರೆ ಆ ಸನ್ನಿವೇಷಗಳಲ್ಲಿ ಅವನಿಗೆ ಉತ್ತರ ಗೊತ್ತಾಗುವ ಪ್ರಕ್ರಿಯೆ ವಿಚಿತ್ರವಾಗಿಯೂ ಸಂಶಯಾಸ್ಪದವಾಗಿಯೂ ಇದೆ. ಮತೀಯ ಗಲಭೆಗಳ ನಡುವೆ ಒಬ್ಬ ಹುಡುಗ ರಾಮನ ವೇಷ ಧರಿಸಿ ಯಾಕೆ ನಿಂತಿರುತ್ತಾನೆ? ಇದು ಕನಸೇ ವಾಸ್ತವವೇ? ಮ್ಯಾಜಿಕ್ ರಿಯಲಿಸಂ ಎಂದಾದರೆ ಚಿತ್ರದಲ್ಲಿ ಬೇರೆಲ್ಲೂ ಯಾಕೆ ಅದರ ಪ್ರಸ್ತಾಪಗಳಿಲ್ಲ? ಒಬ್ಬ ಸ್ಲಂ ಹುಡುಗನ ಕೈಯಲ್ಲಿ ಕೋಲ್ಟ್ ೪೫ ಎಂಬ ಆಧುನಿಕ ರಿವಾಲ್ವರ್ ಹೇಗೆ ಬರುತ್ತದೆ? (ಯಾವುದೇ ಪುಟಗೋಸಿ ರೌಡಿಯ ಕೈಯಲ್ಲಿ ರಿವಾಲ್ವರ್ ಬರುವುದು ಸುಲಭವಲ್ಲ. ಹಾಗೆ ಬಂದರೂ ಅದು ಮೊದಲು ಯಾವುದೋ ದೇಸೀ ಮೇಕ್ ಆಗಿರುವುದು ಸಹಜ ಅಲ್ಲವೇ? ಅಷ್ಟಕ್ಕೂ ಇವನು ಬರೇ ಒಬ್ಬ ಸಣ್ಣ ಹುಡುಗ!) ಕಾಲ್ ಸೆಂಟರಿನಲ್ಲಿ ಬರೇ ಟೀ ಕೊಡುವ ಕೆಲಸ ಮಾಡಿದ್ದರಿಂದ ಒಬ್ಬಾತನಿಗೆ ಬ್ರಿಟೀಷ್ ಇಂಗ್ಲೀಷ್ ಕಲಿಯಲು ಸಾಧ್ಯವೇ? ಅಮೇರಿಕನ್ ದಂಪತಿಗಳು ಎಷ್ಟೇ ಕರುಣಾ ಮಯಿಗಳಾಗಿದ್ದರೂ, ಭಾರತದಲ್ಲಿ ಒಬ್ಬ ಹುಡುಗನಿಗೆ ಟಿಪ್ ಎಂದು ನೂರು ಡಾಲರ್ ನೋಟು ಕೊಟ್ಟಾರೇ? (ಅದೂ ಡಾಲರ್! ಹುಡುಗ ಪಾಪ ಅದನ್ನು ಹೇಗೆ ರೂಪಾಯಿಗೆ ಪರಿವರ್ತಿಸಿಕೊಳ್ಳುವುದು ಎನ್ನುವ ಪರಿವೆಯಾದರೂ ಅವರಿಗೆ ಬೇಡವೇ?!) ತಾಜ್ ಮಹಲ್ ನೋಡಲು ಬರುವ ವಿದೇಶೀಯರು ಅಲ್ಲಿನ ಒಬ್ಬ ಹುಡುಗನಿಂದ ಇದೊಂದು ಪಂಚತಾರಾ ಹೋಟೇಲ್ ಎಂದು ನಂಬುವಷ್ಟು ಮುಠಾಳರೇ? ಹೀಗೆ ಚಿತ್ರವು ಉದ್ದಕ್ಕೂ ಸಂಶಯಗಳನ್ನೂ ನಂಬಲರ್ಹವಲ್ಲವ ವಿಷಯಗಳನ್ನೂ ಕೊಡುತ್ತಾ ಸಾಗುತ್ತದೆ. ಎಲ್ಲಕ್ಕೂ ಕಳಶಪ್ರಾಯವಾಗಿ ಚಿತ್ರದ ಕೊನೆಯಲ್ಲಿ ಒಂದು ಹಿಂದಿ ಸಿನೆಮಾ ಕ್ರಮದ ಹಾಡು-ಕುಣಿತ! ಅಂದರೆ ಈ ಇಡೀ ಚಿತ್ರವೇ ಭಾರತೀಯ ಚಿತ್ರರಂಗದ ಮೇಲಿನ ಅಮೇರಿಕಾದ ನಿಲುವೇ?

ಎ.ಆರ್. ರೆಹಮಾನಿಗೆ ಎರಡೆರಡು ಆಸ್ಕರ್ ಬಂದದ್ದು ತುಂಬಾ ಸಂತೋಷದ ವಿಷಯ. ಭಾರತೀಯ ಮೊಟ್ಸಾರ್ಟ್ ಎಂದೇ ಹೊಗಳಲ್ಪಟ್ಟಿರುವ ಎ.ಆರ್. ರೆಹಮಾನ್ ಜಾಸ್, ರಾಪ್, ಬ್ಲೂಸ್, ವೆಸ್ಟರ್ನ್ ಕ್ಲಾಸಿಕಲ್, ಕ್ಲಾಸಿಕ್ ರಾಕ್, ಕರ್ನಾಟಿಕ್ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಹೀಗೆ ಜಗತ್ತಿನಾದ್ಯಂತದಿಂದ ಶೈಲಿಗಳನ್ನು ಬಳಸುತ್ತಾ ಅಧ್ಬುತವನ್ನು ಸೃಷ್ಟಿಸುವ ಮಾಂತ್ರಿಕ. ಕಳೆದ ಒಂದು ದಶಕಕ್ಕೂ ಮೀರಿ ನಮ್ಮ ಕಿವಿಗಳಿಗೆ ಅಮೃತವನ್ನಿಕ್ಕಿದ ಸಂಗೀತ ನಿರ್ದೇಶಕ ಈತ. ಖಂಡಿತವಾಗಿಯೂ ಅಕಾಡೆಮಿ ಪ್ರಶಸ್ತಿ ಹಾಗೂ ಅದಕ್ಕಿಂತ ಮಿಗಿಲಾದವುಗಳಿಗೂ ಅರ್ಹನೇ. ಹಿಂದೀ ಚಿತ್ರರಂಗದ ಪರಿಚಯ ಇರುವವರಿಗೆ ರಸೂಲ್ ಪುಕುಟಿ ಹೆಸರು ಗೊತ್ತಿಲ್ಲದ ವಿಷಯವಲ್ಲ. ಪೂನಾದ ಎಫ್.ಟಿ.ಐ.ಐ ಪದವೀಧರರಾದ ಇವರು ಹಿಂದೀ ಚಿತ್ರರಂಗದ ಅತಿ ಗಣ್ಯ ಧ್ವನಿ ಸಂಯೋಜಕರಲ್ಲಿ ಒಬ್ಬರು. ಗುಲ್ಜಾರ್ ಕೂಡಾ ಭಾರತೀಯ ಚಿತ್ರರಂಗದ ಅನೇಕ ಪ್ರಮುಖ ಚಿತ್ರಗಳಿಗೆ ಸಾಹಿತ್ಯ ರಚಿಸಿದವರು. ಆದರೆ ವಿಚಿತ್ರವೆಂದರೆ ಇಷ್ಟೆಲ್ಲಾ ಕೆಲಸಗಳನ್ನು ಮಾಡಿದ್ದರೂ, ಇವರೆಲ್ಲರೂ ಅಕಾಡಮಿ ಪ್ರಶಸ್ತಿ ಪಡೆಯಲು ‘ಸ್ಲಂ ಡಾಗ್ ಮಿಲಿಯನೇರ್’ ಚಿತ್ರದವರೆಗೆ ಕಾಯಬೇಕಾಗಿದ್ದು ಈ ಪ್ರಶಸ್ತಿಯ ಧೋರಣೆಯ ಬಗ್ಗೆ ಸಂಶಯವನ್ನು ಉಂಟುಮಾಡುತ್ತದೆ. ಭಾರತಕ್ಕೆ ಅಕಾಡಮಿ ಪ್ರಶಸ್ತಿ ಬಂದಿರುವುದು ಸಂತೋಷದ ವಿಷಯವೇ. ಪಡೆದವರೆಲ್ಲರೂ ತುಂಬಾ ಅರ್ಹರೇ. ಆದರೂ ಈ ಪ್ರಶಸ್ತಿಯನ್ನು ಇನ್ನಿಲ್ಲದಂತೆ ಹೊಗಳುವಾಗ ಅದರ ಹಿಂದಿನ ರಾಜಕೀಯವನ್ನೊಮ್ಮೆ ಯೋಚಿಸುವುದು ಅಗತ್ಯ ಎನಿಸುತ್ತದೆ.

-ಅಭಯ ಸಿಂಹ

Latest Post

You may also like

0 Comments

Leave a Reply

This site uses Akismet to reduce spam. Learn how your comment data is processed.

%d bloggers like this: