ಅದೇ ರಾಗ ಹೊಸಾ ತಾಳ

World Cinema

ಸಿನೆಮಾ ಮಾಧ್ಯಮ ಹುಟ್ಟಿದಾಗ, ಇದೊಂದು ಭವಿಷ್ಯವಿಲ್ಲದ ಉಪಕರಣ ಎಂದು ಅದರ ಸೃಷ್ಟಿಕರ್ತರಾಗಿದ್ದ ಲೂಮಿಯರ್ ಸಹೋದರರೇ ಹೆಳಿದ್ದರಂತೆ. ಆದರೆ ಕೇವಲ ಉಪಕರಣವಾಗಿದ್ದದ್ದು, ಅನೇಕ ಸಾಹಸಿಗಳ ಕೈಸೇರಿ ಒಂದು ಶಕ್ತ ಮಾಧ್ಯಮವಾಗಿ ರೂಪುಗೊಂಡಿತು. ಆದರೆ, ಈ ಮಾಧ್ಯಮಕ್ಕೆ ಹೊಸ ಹೊಸ ವೈಜ್ಞಾನಿಕ ಅನ್ವೇಷಣೆಗಳು ಸದಾ ಹೊಸ ಹುರುಪನ್ನು ಕೊಡುತ್ತಲೇ ಬಂದಿತು. ಧ್ವನಿಯ ಅಳವಡಿಕೆಯಿಂದ ಹಿಡಿದು, ವರ್ಣದ ಅನ್ವಯ, ವಿಭಿನ್ನ ರೀತಿಯ ಫ್ರೇಮ್ ರೇಟಿನಿಂದ ಹಿಡಿದು, ಗೇಟ್ ವರೆಗೆ ವಿಭಿನ್ನ ಪ್ರಯೋಗಗಳು ಈ ಮಾಧ್ಯಮದಲ್ಲಿ ನಡೆದವು. ಈ ಪ್ರತಿಯೊಂದೂ, ಸಿನೆಮಾವನ್ನು ಹೊಸ ಎತ್ತರಕ್ಕೆ ಕರೆದೊಯ್ದದ್ದು ನಿಜ. ಮನುಷ್ಯನ ನೋಡುವ ಮತ್ತು ಕೇಳುವ ಶಕ್ತಿಯನ್ನು ವಿಜ್ಞಾನ ಹೆಚ್ಚು ಹೆಚ್ಚು ಅರ್ಥ ಮಾಡಿಕೊಂಡಂತೆ ಸಿನೆಮಾ ಮಾಧ್ಯಮವೂ ಬದಲಾಗುತ್ತಾ ಬಂತು. ೧:೧.೬೬ ಅನುಪಾತದಲ್ಲಿ ಇದ್ದ ಸ್ಕ್ರೀನ್ ಅಳತೆ ೧:೧.೮೫, ೧:೨.೩೫ ಹೀಗೆ ಬದಲಾವಣೆಗಳನ್ನು ಕಾಣುತ್ತಾ ಹೋಯಿತು. ಇದರಿಂದಾಗಿ ಸ್ಕ್ರೀನಿನಿಂದ ಎಷ್ಟು ದೂರದಲ್ಲಿ ಪ್ರೇಕ್ಷಕ ಕೂರಬೇಕು ಯಾವ ಕೋನದಲ್ಲಿ ಸಿನೆಮಾ ನೋಡಬೇಕು ಹೀಗೆ ನಿರ್ಧಾರಗಳು ಬದಲಾಗುತ್ತಾ ಸಾಗಿದವು. ಇಂಥಾ ವೈಜ್ಞಾನಿಕ ಸಂಶೋಧನೆಗಳು ಆ ಕಾಲದ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗನುಗುಣವಾಗಿ ವಿಭಿನ್ನ ರೂಪಗಳನ್ನು ಪಡೆದದ್ದು ಇತಿಹಾಸದ ಕುತೂಹಲಕಾರೀ ಕಥನವೇ ಆಗಿದೆ. ಅದಂತಿರಲಿ, ಈ ಎಲ್ಲಾ ವೈಜ್ಞಾನಿಕ ಸಂಶೋಧನೆಗಳು, ಕಾಲಾನುಕ್ರಮದಲ್ಲಿ ಸಿನೆಮಾ ಮಾಧ್ಯಮದ ವ್ಯಾಕರಣದ ಮರು ಆವಿಷ್ಕರಣಕ್ಕೂ ಕಾರಣವಾದವು. ಇದು ಸಿನೆಮಾವನ್ನು ಕಲಾತ್ಮಕ ಮಾಧ್ಯಮವಾಗಿ ಪರಿಗಣಿಸಿದವರಿಗೆ, ಮತ್ತು ಪ್ರೇಕ್ಷಕರೆದುರಿಟ್ಟ ಸವಾಲುಗಳು, ಜವಾಬುಗಳು ಕುತೂಹಲಕಾರಿಯಾದುವು.
ಡಿಜಿಟಲ್ ತಂತ್ರಜ್ಞಾನ ಬಂದ ನಂತರ, ಚಿತ್ರರಂಗದಲ್ಲಿ ಬದಲಾವಣೆಯ ವೇಗ ಹೆಚ್ಚಿತು. ಸರಿಯಾಗಿ ಡಿಜಿಟಲ್ ಯುಗವನ್ನು ಇನ್ನೂ ಪ್ರವೇಶಿಸದ ಅನೇಕ ಸಾಂಪ್ರದಾಯಿಕ ಮಾಧ್ಯಮವನ್ನೇ ನಂಬಿದ ಚಿತ್ರರಂಗದ ತಂತ್ರಜ್ಞರು ಇದರಿಂದಾಗಿ ಒದ್ದಾಡುವಂಥಾ ಪರಿಸ್ಥಿತಿ ಏರ್ಪಟ್ಟಿತು. ಡಿಜಿಟಲ್ ತಂತ್ರಜ್ಞಾನ ಮಾಡಿದ ಮೊದಲ ಕೆಲಸವೆಂದರೆ, ಸಿನೆಮಾ ಮಾಡುವ, ನೋಡುವ ತಂತ್ರಜ್ಞಾನಗಳ ಬೆಲೆಯಲ್ಲಿ ಸಾಂಪ್ರದಾಯಿಕ ವ್ಯವಸ್ಥೆಯ ಹೋಲಿಕೆಯಲ್ಲಿ ತೀವ್ರ ಕಡಿತ. ಇದರಿಂದಾಗಿ ಸಿನೆಮಾ ಮಾಡುವ ಕನಸುಗಳಿದ್ದ ಅನೇಕ ಜನರು ಈ ರಂಗಕ್ಕೆ ಧುಮುಕುವುದು ಸಾಧ್ಯವಾಯಿತು. ಇದರಿಂದಾಗಿ ಒಂದು ವಿಚಿತ್ರ ರೀತಿಯ ಗೊಂದಲಮಯ ವಾತಾವರಣವೂ ನಿರ್ಮಾಣವಾಯಿತು. ಕ್ಯಾಮರಾ ಇದ್ದವರೆಲ್ಲರೂ ಸಿನೆಮಾ ಮಾಡುವವರೇ ಎಂದಾದ್ದರಿಂದ ಸಿನೆಮಾ ವ್ಯಾಕರಣ ತೀವ್ರಗತಿಯಲ್ಲಿ ಬದಲಾಗುತ್ತಾ ಹೋಯಿತು. ಹೊಸ ರೀತಿಯ ಇಮೇಜ್‍ಗಳು ರೂಪುಗೊಳ್ಳಲಾರಂಭಿಸಿದವು. ಇದು ಒಂದು ರೀತಿಯಲ್ಲಿ ಸಾಂಪ್ರದಾಯಿಕ ಇಮೇಜ್‍ಗಳನ್ನೇ ಸೃಷ್ಟಿಸುತ್ತಿದ್ದ ಮಾಧ್ಯಮಕ್ಕೆ ಮುಜುಗರವನ್ನು ತರುವಮಟ್ಟಿಗೆ ಬೆಳೆಯಿತು. ಜನರೇಷನ್ ಗ್ಯಾಪ್ ಎನ್ನುವುದು ದೃಶ್ಯ, ಶ್ರವ್ಯ ಮಾಧ್ಯಮದಲ್ಲೂ ಹೊಡೆದು ಕಾಣುವಂತಾಯಿತು. ಹೊಸ ಬದಲಾವಣೆಯ ಕೆಲವು ಕ್ಷೇತ್ರಗಳಲ್ಲಿ ಆದ ಬದಲಾವಣೆಗಳನ್ನು ಈ ದೃಷ್ಟಿಯಲ್ಲಿ ವಿವರಿಸುವ ಪ್ರಯತ್ನವನ್ನು ಇಲ್ಲಿ ಪ್ರಯತ್ನಿಸುತ್ತೇನೆ.
 
ಡಿ.ಐ (ಡಿಜಿಟಲ್ ಇಂಟರ್ಮೀಡಿಯಟ್)
ಸಾಂಪ್ರದಾಯಿಕವಾಗಿ ರೀಲುಗಳಲ್ಲಿ ಚಿತ್ರೀಕರಿಸಿದ ಮೇಲೆ ಅದನ್ನು ಲ್ಯಾಬಿನಲ್ಲಿ ಸಂಸ್ಕರಿಸಿ ವರ್ಣಸಂಸ್ಕರಣೆಯನ್ನೂ ಮಾಡಲಾಗುತ್ತಿತ್ತು. ಆದರೆ ಡಿಜಿಟಲ್ ತಂತ್ರಜ್ಞಾನದ ಆಗಮನದಿಂದ ಈ ವಿಭಾಗದಲ್ಲಿ ಮಹತ್ತರ ಬದಲಾವಣೆಯಾಯಿತು. ರೀಲುಗಳಲ್ಲೋ ಅಥವಾ ಸಾಕಷ್ಟು ಗುಣಮಟ್ಟದ ಡಿಜಿಟಲ್ ಕ್ಯಾಮರಾಗಳಲ್ಲೋ ಚಿತ್ರೀಕರಿಸಿದ್ದನ್ನು, ಡಿಜಿಟಲ್ ಮಾಧ್ಯಮದಲ್ಲಿ ಶೇಖರಿಸಿಟ್ಟುಕೊಂಡು ಅದರಲ್ಲಿ ಪ್ರತಿಯೊಂದು ಫ್ರೇಮನ್ನೂ ಡಿಜಿಟಲ್ ತಂತ್ರಜ್ಞಾನದ ಮೂಲಕ ವರ್ಣ ಸಂಸ್ಕರಣೆ ಮಾಡಲು ಇಂದು ಸಾಧ್ಯವಾಗಿದೆ. (ಫೋಟೋಶಾಪ್ ಅಥವಾ ಅದೇ ರೀತಿಯ ಇತರ ತಂತ್ರಾಂಶವನ್ನು ಬಳಸಿದವರಿಗೆ ಇದರ ಸಾಧ್ಯತೆಗಳ ಅರಿವು ಸುಲಭವಾಗಿ ಆಗಬಹುದು) ಇದರಿಂದ ಇಂದಿನ ಸಿನೆಮಾಗಳಿಗೆ ವರ್ಣದ ಹೊಸ ಮೆರುಗನ್ನು ಕೊಡಲು ಸಾಧ್ಯವಾಗುತ್ತಿದೆ. ಸೃಜನಾತ್ಮಕ ನಿರ್ದೇಶಕನ ಕೈಯಲ್ಲಿ ಈ ಸಾಧನವು ಖಂಡಿತಾ ಒಂದು ನಿರೂಪಣೆಯ ತಂತ್ರವಾಗಿ ಬಳಕೆಯಾಗುತ್ತದೆ. ಆದರೆ ಇದರ ಇನ್ನೊಂದು ಮುಖವೆಂದರೆ, ಹೊಸ ಆಟಿಕೆಯೊಂದು ಸಿಕ್ಕಿದ ಮಕ್ಕಳಂತೆ ಅನೇಕರು ಈ ಮಾಧ್ಯಮವನ್ನು ಕೇವಲ ಚಮತ್ಕಾರಕ್ಕೆ ಬಳಸಲಾರಂಭಿಸಿದರು. ಬೆಳಕಿನೊಂದಿಗೆ ಛಾಯಾಗ್ರಾಹಕನಿಗಿದ್ದ ಸರಸ ಅಂತ್ಯಗೊಂಡಿತು! ಚಿತ್ರೀಕರಿಸುವಾಗ ಎಷ್ಟೇ ಉಡಾಫೆಯಿಂದ ಚಿತ್ರೀಕರಿಸಿದರೂ, ಆಮೇಲೆ ಕಂಪ್ಯೂಟರ್ ಸಹಾಯದಿಂದ ಎಲ್ಲವನ್ನೂ ಸರಿಪಡಿಸಿಕೊಳ್ಳುವ ಹೊಸ ಪೀಳಿಗೆಯೂ ಒಂದು ರೂಪಗೊಂಡಿತು. ಹೀಗಾಗಿ ಚಿತ್ರೀಕರಣದ ವೇಗ ಕೊಂಚ ಹೆಚ್ಚಿದಂತೆ ಕಂಡರೂ, ವರ್ಣ ಸಂಸ್ಕರಣದ ಕಾಲದಲ್ಲಿ ಹೆಚ್ಚು ಸಮಯ ಹಾಗೂ ಹಣ ವ್ಯಯವಾಗಲಾರಂಭಿಸಿದೆ. ರೂಪುಗೊಳ್ಳುವ ಚಿತ್ರಗಳು ಹೆಚ್ಚು ಪ್ರಖರವೂ ವರ್ಣಮಯವೂ ಆಗಿದ್ದರೂ, ಅವುಗಳಲ್ಲಿ ಒಂದು ಮಟ್ಟಿನ ಸಹಜತೆ ಮಾಯವಾಗುತ್ತಿವೆ.
ಸ್ಪೆಷಲ್ ಇಫೆಕ್ಟ್ ಕ್ಷೇತ್ರ
ಹಿಂದೆ ಸಿನೆಮಾದಲ್ಲಿ ಅಧ್ಬುತಗಳನ್ನು ಸಾಧಿಸಲು ಅನೇಕ ತಂತ್ರಗಳನ್ನು ಬಳಸಲಾಗುತ್ತಿತ್ತು. ಸೆಟ್ ಎಕ್ಸ್ಟೆನ್ಶನ್ ಇತ್ಯಾದಿಗಳನ್ನು ಬಹಳ ಕಷ್ಟಪಟ್ಟು ಮಾಡಬೇಕಾಗುತ್ತಿತ್ತು. ಆದರೆ ಇಂದಿನ ಡಿಜಿಟಲ್ ತಂತ್ರಜ್ಞಾನದಿಂದಾಗಿ ಅವೆಲ್ಲವೂ ಬಹಳ ಸುಲಭ ಸಾಧ್ಯವಾಗಿವೆ. ಮೊದಲು ಇಂಥವೆಲ್ಲವನ್ನೂ ಸಾಧಿಸಲು ಒಂದು ದೊಡ್ಡ ತಂಡದ ಅಗತ್ಯವಿರುತ್ತಿತ್ತು. ಆದರೆ ಇಂದು ಅನೇಕರು ಸ್ವತಂತ್ರವಾಗಿ ಇಡೀ ಸಿನೆಮಾದ ಚಮತ್ಕಾರಿಕ ಶಾಟ್‍ಗಳನ್ನು ಏಕಾಂಗಿಯಾಗಿ ನಿಭಾಯಿಸಲು ಶಕ್ತರಾಗಿದ್ದಾರೆ. ಹೀಗಾಗಿ ಇಂದು ತೆರೆಗಾಣುತ್ತಿರುವ ಸಿನೆಮಾಗಳಲ್ಲಿ ಮೊದಲಿಗಿಂತ ಅದೆಷ್ಟೋ ಹೆಚ್ಚಿನ ಚಮತ್ಕಾರಗಳು ಕಾಣಿಸುತ್ತಿವೆ. ನೂರಾರು ಅಡಿ ಎತ್ತರದಿಂದ ಜಿಗಿಯುವುದು, ಮನುಷ್ಯರೊಡನೆ ಜೀವಹೀನ ವಸ್ತುಗಳು ಸಹವರ್ತಿಸುವುದು ಇತ್ಯಾದಿಗಳನ್ನು ನಂಬಲರ್ಹ ಖಚಿತತೆಯೊಂದಿಗೆ ಪರದೆಯಲ್ಲಿ ತೋರಿಸುವುದು ಇಂದಿನ ತಂತ್ರಜ್ಞಾನದಿಂದಾಗಿ ಸಾಧ್ಯವಾಗಿದೆ. ಇದರಿಂದ ಅವತಾರ್ ರೀತಿಯ ಚಿತ್ರಗಳು ಮೂಡಿ ಮನುಷ್ಯನ ಕಲ್ಪನೆಯ ಮೇರೆಗಳನ್ನು ವಿಸ್ತರಿಸಿವೆ. ಜೊತೆಗೆ ಕಲ್ಪನೆಯಲ್ಲಿ ಅಡಗಿರುವ ವಿಕೃತತೆಯನ್ನೂ ಹೊರತಂದಿದೆ. ಎಲ್ಲಾ ವಿಷಯಗಳಂತೆ ಇಲ್ಲೂ ಒಳಿತು, ಕೆಡುಕು ಎರಡೂ ಸಮಪ್ರಮಾಣದಲ್ಲಿ ತಲೆಯೆತ್ತಿವೆ.
ಕ್ಯಾಮರಾದಲ್ಲಿ ಬರುತ್ತಿರುವ ಪ್ರಬೇಧಗಳು
ರೀಲು ಹಾಕಿ ಚಿತ್ರಗ್ರಹಿಸುವ ಕ್ಯಾಮರಾಗಳಲ್ಲಿ ಹೊಸ ಹೊಸ ತಾಂತ್ರಿಕ ಬೆಳವಣಿಗೆಗಳು, ಉತ್ತಮಿಕೆಗಳು ಇನ್ನೂ ಬರುತ್ತಿರುವಾಗಲೇ, ಡಿಜಿಟಲ್ ಕ್ಯಾಮರಾಗಳ ಹಾವಳಿ ತೀವ್ರವಾಗಿದೆ. ಅವುಗಳು ಇನ್ನೂ ರೀಲು ಕ್ಯಾಮರಾಗಳ ಮಟ್ಟಕ್ಕೆ ಬಂದು ನಿಂತಿಲ್ಲವಾದರೂ, ಭುಜಮಟ್ಟಕ್ಕೆ ಬೆಳೆದು ನಿಂತಿದೆ. ರೆಡ್, ಅಲೆಕ್ಸಾ, ಕೊನೆಗೆ ೫ಡಿ ರೀತಿಯ ಹತ್ತು ಹಲವು ಕ್ಯಾಮರಾಗಳು ಇಂದು ಸಿನೆಮಾ ಕ್ಯಾಮರಗಳಾಗಿಬಿಟ್ಟಿವೆ. ವೀಡಿಯೋ ತಂತ್ರಜ್ಞಾನಕ್ಕೆ ಇರುವ ಕಟ್ಟುಪಾಡುಗಳು ಇವುಗಳಿಗೂ ಇರುವುದರಿಂದ, ಸಿನೆಮಾ ಕ್ಯಾಮರಾಗಳಷ್ಟು ಇವು ಭರವಸೆಯ ತಂತ್ರಜ್ಞಾನವಾಗಿಲ್ಲ. ಆದರೆ ಇಂದು ಸಿನೆಮಾವನ್ನು ನೋಡುವ ಪರದೆಯಲ್ಲೇ ಅನೇಕಾನೇಕ ಪ್ರಬೇಧಗಳು ಸೃಷ್ಟಿಯಾಗುತ್ತಿವೆ. ಸಾಂಪ್ರದಾಯಿಕ ದೊಡ್ಡ ಪರದೆಯಿಂದ ಹಿಡಿದು, ಫಳ ಫಳ ಎನ್ನುವ ಮೊಬೈಲ್ ಫೋನಿನವರೆಗೆ ಎಲ್ಲೆಡೆಯೂ ಸಿನೆಮಾಗಳನ್ನು ನೋಡಲಾಗುತ್ತಿವೆ. ಹೀಗಾಗಿ ಹೊಸ ತಲೆಮಾರಿನ ಕ್ಯಾಮರಾಗಳ ಶಕ್ತಿಯೂ ಶಕ್ತ ಸಿನೆಮಾ ಕ್ಯಾಮರಾಗಳಾಗಿ ಪ್ರಚಾರಕ್ಕೆ ಬರುತ್ತಿರುವುದು ಸಹಜವೇ ಆಗಿವೆ. ಅಂತೆಯೇ ಇದರ ಇನ್ನೊಂದು ಮುಖವನ್ನು ಯೋಚಿಸುವುದಾದರೆ, ರೀಲು ಹಾಕಿ ಚಿತ್ರಗ್ರಹಿಸುವ ಕ್ಯಾಮರಾಗಳನ್ನು ಬಳಸುತ್ತಿದ್ದಾಗಿನ ವ್ಯಾಕರಣಗಳನ್ನು ಈ ಹೊಸ ತಲೆಮಾರಿನ ಡಿಜಿಟಲ್ ಕ್ಯಾಮರಾಗಳು ಮೀರಿವೆ. ಆದರೆ ಸಾಂಪ್ರದಾಯಿಕ ಚಿತ್ರಕಟ್ಟುವಿಕೆ ಈ ಹೊಸ ಮಾದರಿಯ ಕ್ಯಾಮರಾಗಳಲ್ಲಿ ಸೋತಿವೆ. ಹೊಸ ಸಾಧ್ಯತೆಗಳನ್ನು ಇನ್ನೂ ಸಂಪೂರ್ಣವಾಗಿ ಶೋಧಿಸುವಲ್ಲಿ ನಮ್ಮ ಸಿನೆಮಾ ತಂತ್ರಜ್ಞರು, ಕಲಾವಿದರು ವ್ಯಸ್ಥರಾಗಿದ್ದಾರೆ.
ಡಿಜಿಟಲ್ ಪ್ರೊಜೆಕ್ಷನ್
ಕ್ಯೂಬ್, ಯೂಎಫ಼್‍‍ಓ, ಪ್ರಸಾದ್ ಇತ್ಯಾದಿ ಕಂಪನಿಗಳು ಸಿನೆಮಾ ಪ್ರದರ್ಶನ ವ್ಯವಸ್ಥೆಯನ್ನೇ ಬದಲಾಯಿಸಿದವು. ಈ ಕಂಪನಿಗಳು, ೨ಕೆ ಪ್ರೊಜೆಕ್ಟರುಗಳನ್ನು ಪ್ರತಿಯೊಂದು ಸಿನೆಮಾಮಂದಿರಗಳಲ್ಲಿಯೂ ಸ್ಥಾಪಿಸುತ್ತಿವೆ. ಇದರಿಂದಾಗಿ ಉತ್ತಮ ಗುಣಮಟ್ಟದ ಡಿಜಿಟಲ್ ಪ್ರೊಜೆಕ್ಷನ್ ಸಾಧ್ಯವಾಗುತ್ತಿವೆ. ಮೊದಲು ಕಲ್ಪನೆಯೋ ಎನಿಸುತ್ತಿದ್ದಂಥಾ, ರಿಮೋಟ್ ಪ್ರೊಜೆಕ್ಷನ್, ಹಾರ್ಡ್ ಡಿಸ್ಕ್ ಪ್ರೊಜೆಕ್ಷನ್ ಕೊನೆಗೆ ಬ್ಲೂ-ರೇ ಪ್ರೊಜೆಕ್ಷನ್ ಕೂಡಾ ಸಾಧ್ಯವಾಗುತ್ತಿವೆ. ಇದರಿಂದ ಒಂದೇ ಸಿನೆಮಾದ ಹಲವು ಪ್ರತಿಗಳು ಏಕಕಾಲದಲ್ಲಿ ಬಿಡುಗಡೆಯಾಗುವುದು ಬಹಳ ಸುಲಭ ಹಾಗೂ ಮಿತವ್ಯಯಿಯಾಯಿತು. ಮೊದಲಿನಂತೆ ಸುಮಾರು ೫೦೦೦೦ರೂಪಾಯಿ ಖರ್ಚು ಮಾಡಿ ಸಿನೆಮಾದ ಪ್ರತಿಯನ್ನು ಮಾಡುವುದು, ಅದನ್ನು ಸಿನೆಮಾ ಗೃಹಕ್ಕೆ ತಲುಪಿಸುವ ಖರ್ಚು, ಅವುಗಳ ಸಂರಕ್ಷಣೆ ಇತ್ಯಾದಿಗಳು ಇದ್ದಕ್ಕಿದ್ದಂತೆ ಮಾಯವಾಯಿತು. ಇದನ್ನೇ ನಂಬಿದ್ದ ಅನೇಕರು ಕೆಲಸ ಕಳೆದುಕೊಂಡದ್ದು ನಿಜವಾದರೂ, ಸಿನೆಮಾ ನಿರ್ಮಾಪಕರು, ವಿತರಕರಿಗೆ ಇದು ಒಂದು ವರದಾನವಾಯಿತು. ಹೀಗಾಗಿ ಸಿನೆಮಾದ ನಿರ್ಮಾಣ ಹಾಗೂ ವ್ಯಾಪಾರ ಎರಡೂ ತೀವ್ರತರವಾದ ಬದಲಾವಣೆಯನ್ನು ಕಾಣುವಂತಾಯಿತು. ಹೈ ಡೆಫಿನಿಷನ್ ಕ್ಯಾಮರಾದಲ್ಲಿ ಚಿತ್ರೀಕರಣಗೊಂಡಿರುವ ಏನನ್ನೇ ಆದರೂ ಈ ಚಿತ್ರಮಂದಿರಗಳು ಸುಂದರವಾಗಿಯೇ ತೋರಿಸುವ ಸಾಮರ್ಥ್ಯ ಹೊಂದಿರುವುದರಿಂದ ಮತ್ತು ಇಂಥಾ ಕ್ಯಾಮರಾಗಳು ಇಂದು ಸಣ್ಣ ಮೊತ್ತಕ್ಕೇ ಸಿಗಲಾರಂಭಿಸಿರುವುದರಿಂದ, ಮೊದಲು ಕೇವಲ ಕನಸುಕಾಣುತ್ತಿರುವವರು ಇಂದು ತಮ್ಮ ಕನಸುಗಳಿಗೆ ಕ್ಯಾಮರಾ ಹಿಡಿಯುವಂತಾಗಿದೆ. ಜೊತೆಗೆ ೨ಕೆ ಪ್ರೊಜೆಕ್ಟರುಗಳು ಮೇಲ್ಮಧ್ಯಮ ವರ್ಗದ ಜನರಿಗೆ ದೊರೆಯುವ ಕ್ರಯಕ್ಕೆ ಇಳಿಯುತ್ತಿರುವುದರಿಂದಾಗಿ ಮನೆಯಲ್ಲೇ ಸಿನೆಮಾ ಪರದೆಗಳನ್ನು ಹಾಕಿಸಿಕೊಳ್ಳುತ್ತಿರುವ, ಕ್ಯೂಬ್, ಯುಎಫ್‍ಓ ಕನೆಕ್ಷನ್ ತೆಗೆದುಕೊಳ್ಳುತ್ತಿರುವ, ಈ ಮೂಲಕ ಮನೆಯಲ್ಲೇ ಸಿನೆಮಾ ಗೃಹದ ಅನುಭವ ಪಡೆಯುತ್ತಿರುವ ಜನರ ಸಂಖ್ಯೆ ಹೆಚ್ಚಲಾರಂಭಿಸಿವೆ. ಸಿನೆಮಾವನ್ನು ನೋಡುವ ಕ್ರಮ ಬದಲಾಗುತ್ತಿದ್ದಂತೆ, ಅದನ್ನು ರೂಪಿಸುವ ಕ್ರಮ, ಅದರಲ್ಲಿ ಹೇಳುವ ವಿಷಯಗಳೂ ಬದಲಾಗಬೇಕಾಗುತ್ತದೆಯಷ್ಟೇ? ಹೀಗಾಗಿ ಸಿನೆಮಾದಲ್ಲಿನ ಅಭಿವ್ಯಕ್ತಿಯೂ ದಿನೇ ದಿನೇ ಬದಲಾಗುತ್ತಿರುವ ಪ್ರೇಕ್ಷಕರಂತೆ ಬದಲಾಗುತ್ತಿದೆ.
೩ಡಿ (ಮೂರು ಆಯಾಮದ ಚಿತ್ರಗಳು)
ಬಹಳ ಹಿಂದೆ ಭಾರತದಾದ್ಯಂತ ಬಿಡುಗಡೆಯಾಗಿದ್ದ ಚೋಟಾ ಚೇತನ್ ಎಂಬ ಸಿನೆಮಾ ಭಾರತೀಯರಲ್ಲಿ ಮೂರು ಆಯಾಮದ ಚಿತ್ರಗಳ ಬಗ್ಗೆ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಆಮೇಲೆ ಅನೇಕ ವರ್ಷಗಳ ನಂತರ ಈಗ ವಿಶ್ವ ಸಿನೆಮಾ ರಂಗದಲ್ಲಿ ಮತ್ತೆ ಮೂರು ಆಯಾಮದ ಚಿತ್ರಗಳ ಮಹಾಪೂರವೇ ಬರುತ್ತಿವೆ. ಈಗ ಮನೆಯ ಹಾಲಿಗೂ ಈ ತಂತ್ರಜ್ಞಾನ ತಲುಪಿದೆ. ಇದರಿಂದಾಗಿ ಸಿನೆಮಾವನ್ನು ನೋಡುವ ಹಾಗೂ ಮಾಡುವ ಕ್ರಮಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಪ್ರೇಕ್ಷಕರಿಗೆ ಎರಡು ಆಯಾಮದ ಮೂಲಕ ಕಥೆ ಹೇಳುತ್ತಿದ್ದ ಸಿನೆಮಾ ನಿರ್ದೇಶಕರು ಸಾಂಪ್ರದಾಯಿಕ ಬ್ರೆಕ್ಟ್ ವೇದಿಕೆಯ ರೀತ್ಯಾ, ೧೮೦ಡಿಗ್ರಿ ಕೋನದಲ್ಲೇ ತಮ್ಮ ಶಾಟ್ಸ್ ಕಂಪೋಸ್ ಮಾಡುತ್ತಿದ್ದರು. ಆದರೆ ಈ ಮೂರನೇ ಆಯಾಮ ಬಂದ ಮೇಲೆ, ಅದರ ಚಮತ್ಕಾರದ ಹಂತವನ್ನು ಅದು ದಾಟಿಕೊಂಡ ಮೇಲೆ ಆ ಮಾಧ್ಯಮ ಈಗ ತನ್ನ ಶಾಟ್ ಟೇಕಿಂಗ್ ಕಡೆಗೂ ಗಮನವನ್ನು ಹರಿಸಲಾರಂಭಿಸಿದೆ. ಇದರಿಂದಾಗಿ ಸಿನೆಮಾ ವ್ಯಾಕರಣವೇ ಮತ್ತೆ ಪರಿಷ್ಕರಣಗೊಳ್ಳುವ ಅಗತ್ಯ ಏರ್ಪಟ್ಟಿದೆ. ಮೊದಲು ಕೇವಲ ಚಮತ್ಕಾರಗಳಿಗಾಗಿ (ಕಣ್ಣಿಗೆ ಕುಕ್ಕುವ ಚೂರಿ, ನಮ್ಮೆಡೆಗೆ ಹಾರಿ ಬರುವ ತಿಂಡಿ ತಿನಿಸುಗಳು ಇತ್ಯಾದಿ) ಬಳಸುತ್ತಿದ್ದ ಈ ಮೂರು ಆಯಾಮದ ಚಿತ್ರಿಕೆಗಳು ಈಗೀಗ ಪ್ರಬುದ್ಧತೆಯನ್ನು ತಲಪುತ್ತಿದೆ. ಚಮತ್ಕಾರಗಳನ್ನು ಬಿಟ್ಟು, ಅನುಭವದೊಳಗೆ ಪ್ರೇಕ್ಷಕರನ್ನು ಕರೆದೊಯ್ಯಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಟಿನ್ ಟಿನ್, ಲೈಫ್ ಆಫ್ ಪೈ ಇತ್ಯಾದಿ ಚಿತ್ರಗಳನ್ನು ಈ ಸಾಲಿನಲ್ಲಿ ಹೆಸರಿಸಬಹುದಾಗಿದೆ.
ಪ್ರಚಾರ ಹಾಗೂ ಮಾರುಕಟ್ಟೆ
ಫೇಸ್ ಬುಕ್, ಲಿಂಕ್ಡ್ ಇನ್ ಇತ್ಯಾದಿ ಅಂತರ್ಜಾಲದಲ್ಲಿನ ಸಾಮಾಜಿಕ ತಾಣಗಳಿಂದಾಗಿ ಇಂದು ಒಂದು ಸಿನೆಮಾದ ಪ್ರಚಾರ ಶೈಲಿ ತೀವ್ರ ಬದಲಾವಣೆಯನ್ನು ಅನುಭವಿಸುತ್ತಿದೆ. ಅಂತರ್ಜಾಲದಲ್ಲಿ ಇರುವ ಸಿನೆಮಾ ನೋಡುಗರನ್ನು ಸೆರೆಹಿಡಿಯಲು ಎಲ್ಲಾ ಸಿನೆಮಾ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ. ಯೂಟ್ಯೂಬ್ ರೀತಿಯ ಅನೇಕ ಸಾಧನಗಳನ್ನು ಬಳಸಿ ತಮ್ಮ ಸಿನೆಮಾದೆಡೆಗೆ ಜನರನ್ನು ಆಕರ್ಷಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದಾಗಿ ಸುಲಭದಲ್ಲಿ ವ್ಯಾಪಕವಾಗಿ ಜನರನ್ನು ತಲಪುವ ಅ-ಸಂಪ್ರದಾಯಿಕ ಮಾಧ್ಯಮಗಳು ಇಂದು ಪ್ರಚಾರ ಕ್ಷೇತ್ರಕ್ಕೆ ಅಡಿಯಿಟ್ಟಂತಾಗಿದೆ. ಮೊದಲು ಗೋಡೆಗಳಲ್ಲಿ ರಾರಾಜಿಸುತ್ತಿದ್ದ ಸಿನೆಮಾ ಪೋಸ್ಟರ್ರುಗಳು, ಇಂದು ಕಿಮ್ಮತ್ತು ಖರ್ಚಿಲ್ಲದೇ ನಮ್ಮ ಮನೆಯೊಳಗೆ ಪ್ರವೇಷಿಸಿವೆ. ಒಂದು ರೀತಿಯ ಮಾಹಿತಿ ಮಹಾಪೂರದಲ್ಲಿ ಸಿನೆಮಾಗಳೂ ತಮ್ಮದೇ ಒಂದು ಸ್ಥಳವನ್ನು ಮಾಡಿಕೊಂಡಿದೆ. ಅಂತರ್ಜಾಲವನ್ನೇ ಒಂದು ಮಾರುಕಟ್ಟೆಯಾಗಿ ರೂಪಿಸಿಕೊಂಡದ್ದೂ ಸಾಕಷ್ಟು ಉದಾಹರಣೆಗಳು ನಮಗೆ ಸಿಗುತ್ತವೆ.
ಪೈರಸಿ
ಗೂಂಡಾ ಕಾಯ್ದೆಯಡಿಯಲ್ಲಿ ಪೈರಸಿಯನ್ನು ತಡೆಯುವತ್ತ ಚಿತ್ರರಂಗ ಶ್ರಮಿಸುತ್ತಿರುವಾಗ ಅಂತರ್ಜಾಲದಲ್ಲಿ ಟಾರೆಂಟ್ಸ್ ಇತ್ಯಾದಿ ಹಲವು ವಿಧಾನಗಳಲ್ಲಿ ಬಿಟ್ಟಿಯಾಗಿ ಸಿನೆಮಾಗಳನ್ನು ಹಂಚಿಕೊಳ್ಳಲಾಗುತ್ತಿವೆ. ಬೇಕಾದ್ದು, ಬೇಡದ್ದು ಹೀಗೆ ಯಾವುದೇ ಲಗಾಮು ಇಲ್ಲದೇ ಚಿತ್ರಗಳನ್ನು ಹಂಚಿಕೊಳ್ಳಲಾಗುತ್ತಿದೆ. ಇದು ಇಂದು ಒಂದು ಗುಣಪಡಿಸಲಾಗದ ರೋಗವಾಗಿ ಬೆಳೆದಿದೆ. ಹೀಗಾಗಿ ಅದನ್ನು ಹೋರಾಡದೇ, ಅದನ್ನೇ ಒಂದು ವ್ಯಾಪಾರದ ಚೌಕಟ್ಟಿನೊಳಗೆ ತರುವ ಚಿಂತನೆಯನ್ನು ಚಿತ್ರರಂಗ ಮಾಡಬೇಕಾಗಿದೆ. ಕಂಪ್ಯೂ-ಸಾಕ್ಷರ ಪ್ರೇಕ್ಷಕರಿಗೆ ಪೈರಸಿ ಮಾಡಬೇಡಿ ಎನ್ನುವ ಬದಲಿಗೆ, ಅದಕ್ಕಿಂತ ಉತ್ತಮವಾದ ಗುಣಮಟ್ಟವನ್ನು ಸಣ್ಣ ಮೊತ್ತದಲ್ಲಿ ಕೊಟ್ಟೋ, ಅಥವಾ ಇನ್ಯಾವುದೋ ಹೊಸ ವಿಧಾನದಿಂದ ಚಿತ್ರರಂಗದವರನ್ನು ಉಳಿಸುವ ಅಗತ್ಯವಿದೆ.
ತಾಂತ್ರಿಕ ಬೆಳವಣಿಗೆಯಿಂದ ಚಿತ್ರರಂಗ ಇಂದು ಹಿಂದೆಂದಿಗಿಂತಲೂ ವೇಗವಾಗಿ ಬೆಳೆಯುತ್ತಿದೆ, ಬದಲಾಗುತ್ತಿದೆ. ವ್ಯಾಕರಣವನ್ನು ಮತ್ತೆ ಮತ್ತೆ ತಿದ್ದಲಾಗುತ್ತಿದೆ. ಆದರೆ ಈ ವೇಗವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವಲ್ಲಿ, ಅದನ್ನು ಸದ್ಬಳಕೆ ಮಾಡುವಲ್ಲಿ ನಮ್ಮ ತಲೆಮಾರಿನ ಸಿನೆಮಾ ನಿರ್ದೇಶಕರು ಹಿಂದೆಬೀಳುತ್ತಿದ್ದಾರೆ ಎಂದೇ ಹೇಳಬಹುದು. ಸಾಂಪ್ರದಾಯಿಕ ಶೈಲಿಯಲ್ಲಿ ಚಿತ್ರಗಳನ್ನು ಮಾಡುತ್ತಿದ್ದವರ ಕೈಗೆ ಹೊಸ ತಂತ್ರಜ್ಞಾನ ಸಿಕ್ಕಿದೆ. ಹೀಗಾಗಿ ಸಾಂಪ್ರದಾಯಿಕ ಶೈಲಿಯ ಕಥನಗಳನ್ನು ಹೊಸ ತಂತ್ರಜ್ಞಾನದ ಮೂಲಕ ಹೇಳಲಾಗುತ್ತಿದೆ. ಇದು ಅನೇಕ ಆಭಾಸಗಳಿಗೆ ಎಡೆಗೊಡುತ್ತಿದೆ. ಡಿಜಿಟಲ್ ತಂತ್ರಜ್ಞಾನದ ಬಳಕೆ, ಚಮತ್ಕಾರಿಕ ಶಾಟ್ಸ್ ರೂಪಿಸಲು ಬಳಸಿ, ಚಿತ್ರವಿಚಿತ್ರವಾದ ಕಾಲ್ಪನಿಕ ವಸ್ತುಗಳು ಜನರೆದುರು ಬರುತ್ತಿವೆ. ಇದೂ ಒಂದು ರೀತಿಯ ಮಾಯಾ ಲೋಕವೇ ಸರಿ. ಆದರೂ, ಹಿಂದೆಂದಿಗಿಂತಲೂ ನಮ್ಮ ಸಿನೆಮಾಗಳು ಜೀವನದಿಂದ ದೂರವಾಗುತ್ತಾ ಸಾಗಿವೆ. ಹೀಗಾಗಿ ಜನರ ಅಭಿರುಚಿ ಬದಲಾಗುತ್ತಿವೆ. ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಷದಲ್ಲಿ ಇದು ಸಹಜವೇ ಆಗಿರಬಹುದು. ಕನ್ನಡ ಚಿತ್ರರಂಗದ ಬಗ್ಗೆ ಹೇಳುವುದೇ ಆದರೆ, ಹೊಸತನ ಎನ್ನುವುದು ತಾಂತ್ರಿಕವಾಗಿ ಕಂಡು ಬರುತ್ತಿದ್ದರೂ, ಕಥನ ಶೈಲಿಯಲ್ಲಿ ಅಷ್ಟಾಗಿ ಕಂಡುಬರುತ್ತಿಲ್ಲ. ಇವೆರಡನ್ನೂ ಸಮತೂಕಕ್ಕೆ ತರುವುದು ಚಿತ್ರರಂಗವಾಗಿ ನಮ್ಮ ಇಂದಿನ ಅಗತ್ಯವಾಗಿದೆ.

 

Latest Post

You may also like

0 Comments

Leave a Reply

This site uses Akismet to reduce spam. Learn how your comment data is processed.

%d bloggers like this: