Chance ಸಂತೆಯಲ್ಲಿ luckಗಾಗಿ ಹುಡುಕಾಟ

World Cinema

Luck by Chance ಈ ಚಿತ್ರದ ಹೆಸರೇ ಚಿತ್ರವನ್ನು ಮೂರಕ್ಷರಗಳಲ್ಲಿ ಬಂಧಿಸುವ ಪರಿ ಚಿತ್ರದ ಉದ್ದಕ್ಕೂ ಕಂಡು ಬರುತ್ತದೆ. ಚಿತ್ರರಂಗದ ಒಳಹೊರಗುಗಳನ್ನಿಟ್ಟುಕೊಂಡು ಸರಳವಾದ, ಹಳೆಯದಾದ ಒಂದು ಕಥೆಯನ್ನು ಮತ್ತೆ ಹೇಳಲಾಗಿದೆ. ಆದರೆ ಇಲ್ಲಿ ಹೊಸತನ ಇದೆ. ಜೀವ ಇದೆ. ಒಳ್ಳೆಯ ನಟನೆಗಳಿವೆ, ಅನೇಕ ಕಡೆಗಳಲ್ಲಿ ನವಿರಾದ ಹಾಸ್ಯವಿದೆ. ಒಟ್ಟಿನಲ್ಲಿ ಇಂದು ನಾನು ಆ ಚಿತ್ರವನ್ನು ನೋಡಿದಾಗ ಇನ್ನೊಮ್ಮೆ ನೋಡಬೇಕು ಎನಿಸಿತು. ಅಂಥಾ ಗುಣ ಈ ಚಿತ್ರಕ್ಕಿದೆ. ಚಿತ್ರರಂಗದ ಒಳಗಿನ ವಿಷಯಗಳನ್ನಿಟ್ಟುಕೊಂಡು ಅನೇಕ ಚಿತ್ರಗಳು ಬಂದಿವೆ. ಇವುಗಳಂತೆ ಇದೂ ಒಂದು ಎಂದು ತಿರಸ್ಕರಿಸುವುದು ಸುಲಭ. ಆದರೆ ಇಲ್ಲಿ ನನಗೆ ವಿಶೇಷವಾಗಿ ಅನಿಸಿದ್ದೆಂದರೆ, ಇಡೀ ಚಿತ್ರದ ಕಥೆ ಇತ್ಯಾದಿಗಳನ್ನು ಹೊರತು ಪಡಿಸಿ ಒಂದು ವಾತಾವರಣವನ್ನು ಕಟ್ಟುವಲ್ಲಿ ನಿರ್ದೇಶಕಿ ಅಖ್ತರ್ ಯಶಸ್ವಿಯಾಗಿದ್ದಾಳೆ. ಮುಂಬೈಯಿಯಲ್ಲಿನ ಕೊಳೆಯುತ್ತಿರುವ ಬದುಕಿನಲ್ಲಿ ಕಮಲಗಳು ಹುಟ್ಟುವ ಪರಿಯನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾಳೆ. ಮುಂಬೈ ಸಿನೆಮಾರಂಗದಲ್ಲಿನ ಕನಸುಗಳು ಹುಟ್ಟುವ ಜಾಗತ ಚಿತ್ರಣ ವಾಸ್ತವಕ್ಕೆ ಬಹಳ ಸಮೀಪ ಬಂದಿರುವ ಕೆಲವೇ ಚಿತ್ರಗಳಲ್ಲಿ ಖಂಡಿತವಾಗಿಯೂ ಇದು ಒಂದು. ಕನಸುಗಳನ್ನು ಸಾಕಾರಗೊಳಿಸಲು ಮುಂಬೈ ಸೇರುವ ಸಾವಿರಾರು ಮಂದಿಗಳ ಹೃದಯವನ್ನು ಈ ಚಿತ್ರ ಖಂಡಿತಾ ಗೆಲ್ಲುತ್ತದೆ. ಜೊತೆಗೆ ಚಿತ್ರರಂಗದ ಬಗ್ಗೆ ಕುತೂಹಲ ಇರುವ ಉಳಿದ ಭಾರತೀಯ ಜನತೆಗೂ ಈ ಚಿತ್ರ ರಂಜನೆಯನ್ನು ಕೊಡುತ್ತದೆ ಎಂದು ನನ್ನ ಅನಿಸಿಕೆ.

ಫಿಲಂ ಸಿಟಿ, ಫಿಲ್ಮಿಸ್ಥಾನ್ ಇತ್ಯಾದಿ ಸ್ಥಳಗಳಲ್ಲಿ ಒಮ್ಮೆ ಸುಳಿದಾಡಿ ಬನ್ನಿ. ಅದೊಂದು ಸಾಗರ. ದಿನ ಬೆಳಗಾದರೆ ಚಿತ್ರೀಕರಣ ನಡೆಯುತ್ತಿರುತ್ತವೆ, ದೊಡ್ಡ ದೊಡ್ಡ ಹೆಸರುಗಳು ಸುತ್ತಮುತ್ತ ಓಡಾಡುತ್ತಿರುತ್ತವೆ. ಅಲ್ಲಿ ಇದ್ದಾಗ ಇನ್ನೇನು ನಾನೂ ಸ್ವರ್ಗದಲ್ಲಿ ಇದ್ದೇನೆ ಎನ್ನುವ ಭಾವಸದಾ ನಮ್ಮಲ್ಲಿ. ಆದರೆ ಮರಳಿ ಲೋಕಲ್ ರೈಲಿನಲ್ಲಿ ಮನೆಗೆ ಬಂದು ಬೆವರು ಹೀರುವ ಮುಂಬೈನ ಸೆಖೆಯಲ್ಲಿ ತಲೆಖಾಲಿಯಾಗಿ ಬಿದ್ದುಕೊಂಡಾಗ ಮುಂಬೈ ಚಿತ್ರರಂಗ ಎನ್ನುವ ಸಾಗರದ ಅಗಾಧತೆ ನಮ್ಮನ್ನು ಕಾಡುತ್ತದೆ. ಇಲ್ಲಿನ ಗಲ್ಲಿಗಳಲ್ಲಿ ಸುತ್ತಿದರೆ, ಚಿತ್ರರಂಗಕ್ಕೆ ಅಗತ್ಯವಾದ ಚಿತ್ರ-ವಿಚಿತ್ರ ಕೆಲಸಗಳನ್ನು ಮಾಡುವ ಅಸಂಖ್ಯಾತ ಜನ ಸಿಗುತ್ತಾರೆ. ಆಪ್ಟಿಕಲ್ ಇಫೆಕ್ಟ್ ಮಾಡುವವರು ಕೆಲವರು ಯಾವುದೋ ಫ್ಲಾಟಿನ ಎಷ್ಟನೆಯದೋ ಮಹಡಿಯಲ್ಲಿ ಕಳೆದ ಇಪ್ಪತ್ತು ವರುಷಗಳಿಂದ ಕೆಲಸ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಪೋಸ್ಟರುಗಳನ್ನು ಕೈಯಲ್ಲೇ ಬಿಡಿಸುವ ಪೇಯಿಂಟರುಗಳು ದಿಲೀಪ್ ಕುಮಾರ್, ರಾಜ್ ಕುಮಾರ್‍ಗಳಿಂದ ಶಾರುಖ್ ಖಾನ್, ಅಕ್ಷಯ್ ಕುಮಾರ್‍ವರೆಗೆ ಬಂದಿದ್ದಾರೆ. ಇನ್ಯಾವುದೋ ಪ್ಲಾಟಿನಲ್ಲಿ ಕುಳಿತ ಸಂಗೀತ ನಿರ್ದೇಶಕರೊಬ್ಬರು ‘ಸಿ’ ಗ್ರೇಡಿನಲ್ಲಿ ತಮ್ಮ ೨೦೦ನೇ ಸಿನೆಮಾ ಸಂಗೀತ ನಿರ್ದೇಶನದಲ್ಲಿ ವ್ಯಸ್ಥರಾಗಿದ್ದಾರೆ. ಪುಟ್ಟ ಕ್ಯಾಂಟೀನೊಂದರ ಹೊರಗೆ ಎರಡು ಸೀರಿಯಲ್ ಮಾಡಿದಾತ, ನಾಲ್ಕು ಸಿನೆಮಾಗಳಲ್ಲಿ ಗುಂಪಿನಲ್ಲಿ ನಿಂತವ, ಒಂದು ಜಾಹೀರಾತಿನಲ್ಲಿ ಮುಖ್ಯ ಪಾತ್ರ ಮಾಡಿದವನು, ನಲವತ್ತು ಪ್ರೊಡಕ್ಷನ್ ಹೌಸಿನಲ್ಲಿ ಚಿತ್ರ ಕೊಟ್ಟುಬಂದಿರುವವಳೊಬ್ಬಳು ಹಾಗೂ ತನ್ನ ನಾಲ್ಕನೇ ಚಿತ್ರಕಥೆಯ ಕುರಿತಾಗಿ ಯೋಚಿಸುತ್ತಿರುವವನೊಬ್ಬನು ಕುಳಿತು ಚಾ ಕುಡಿಯುತ್ತಿದ್ದಾರೆ. ಮುಂಬೈ ಚಿತ್ರರಂಗದ ದಡದಲ್ಲಿನ ಸಣ್ಣ ತೆರೆಗಳ ವಿವರ ಇವು!

ಚಿತ್ರದಲ್ಲಿ ಕೆಲವಷ್ಟು ವಿಷಯಗಳನ್ನು ಕ್ಯಾರಿಕೇಚರ್ ಆಗಿ ಬಳಸಿಕೊಳ್ಳಲಾಗಿದೆ. ಇದರ ಅಗತ್ಯ ಇತ್ತೋ ಎಂದು ಸಂಶಯ ಅನೇಕ ಬಾರಿ ಕಾಡಿದರೂ, ಬಹುಷಃ ಚಿತ್ರದ ಪ್ರೇಕ್ಷಕವರ್ಗದ ಪರಿಧಿಯನ್ನು ವಿಸ್ತರಿಸಿಕೊಳ್ಳುವ ಪ್ರಯತ್ನ ಇದು ಇರಬೇಕು ಎಂದನಿಸುತ್ತದೆ. ಪ್ರತಿಯೊಬ್ಬ ನಿರ್ದೇಶಕನೂ ತೊಳಲಾಡುವ ಒಂದಂಶ ಇದು. ಚಿತ್ರರಂಗದ ಭಾಷೆಯಲ್ಲಿ ಹೇಳುವುದಾದರೆ, Class – Mass ನಡುವಿನ ಸಂಘರ್ಷ ಇದು! ಚಿತ್ರದಲ್ಲಿ ಮತ್ತೊಂದು ಗಮನಾರ್ಹ ಅಂಶ ಎಂದರೆ, ಚಿತ್ರರಂಗದ ವಾಸ್ತವತೆಯನ್ನು ತೋರಿಸಲು, ಪರಿಚಿತ ಮುಖಗಳನ್ನೇ ಬಳಸಿರುವುದು. ದಿನಬೆಳಗಾದರೆ ನಾವು ಚಿತ್ರರಂಗಕ್ಕೇ ಸೀಮಿತವಾದ ಪತ್ರಿಕೆಗಳಲ್ಲಿ ಓದುವ, ನೋಡುವ ವ್ಯಕ್ತಿಗಳನ್ನೇ ಅವರ ದೈನಂದಿನ ಕೆಲಸ ಮಾಡುತ್ತಿರುವಂತೆ ನೋಡುವ ಅನುಭವ ಪ್ರೇಕ್ಷಕರಲ್ಲಿ ಖಂಡಿತಾ ನಿಜವನ್ನೇ ನೋಡಿದ ಅನುಭವವನ್ನು ಉಂಟುಮಾಡಲಿದೆ. ಇದು ಚಿತ್ರಕ್ಕೆ ಬಹಳ ಸಹಾಯ ಮಾಡಿದೆ. ಬಹುಷಃ ಚಿತ್ರರಂಗದಲ್ಲಿ ಸಾಹಿತ್ಯದ ರಾಜನಾದ ಜಾವೇದ್ ಅಖ್ತರ್ ಮಗಳಾಗಿರುವುದು ಖಂಡಿತಾ ಇಲ್ಲಿ ನಿರ್ದೇಶಕಿಗೆ ಸಹಾಯವಾಗಿದೆ. ಆದರೆ ಒಳ್ಳೆಯ ಪರಿಣಾಮಕ್ಕಾಗಿ ಇಂಥಾ ಸಂಪರ್ಕವನ್ನು ಬಳಸಿಕೊಳ್ಳುವುದರಲ್ಲೇನೋ ತಪ್ಪಿಲ್ಲ ಬಿಡಿ. ಇದರಿಂದ ಚಿತ್ರದಲ್ಲಿ, ಸ್ವತಃ ಜಾವೇದ್ ಅಖ್ತರ್ ಹಾಗೂ ಶಬನಾ ಅಶ್ಮಿಯಿಂದ ಹಿಡಿದು, ಆಮೀರ್ ಖಾನ್, ಕರೀನಾ ಕಪೂರ್, ಅಭಿಶೇಖ್ ಬಚ್ಚನ್, ಜಾನ್ ಅಬ್ರಹಾಂ, ಅಕ್ಷಯ್ ಖನ್ನ, ಶಾರೂಖ್ ಖಾನ್, ಹೃತಿಕ್ ರೋಷನ್ ಹೀಗೆ ಸಾಲು ಸಾಲು ಗಣ್ಯ ಕಲಾವಿದರು ಅತಿಥಿಗಳಾಗಿ ನಟಿಸುವುದನ್ನು ನಾವಿಲ್ಲಿ ಕಾಣಬಹುದು.

ಒಟ್ಟಿನಲ್ಲಿ ಖಂಡಿತಾ ಹೋಗಿ ಈ ಚಿತ್ರವನ್ನು ನೋಡಿ… ಇತ್ತೀಚಿನ ನೋಡಬಲ್ ಚಿತ್ರಗಳಲ್ಲಿ ಇದಂತೂ ಖಂಡಿತವಾಗಿಯೂ ಒಂದು.

  • ಅಭಯ ಸಿಂಹ
Latest Post

You may also like

0 Comments

Leave a Reply

This site uses Akismet to reduce spam. Learn how your comment data is processed.

%d