District 9

World Cinema

ಯಾವುದೇ ಒಂದು ಕಥಾ ವಸ್ತುವಿನೊಂದಿಗೆ ಒಂದು ಮಾಧ್ಯಮ ಬಹಳ ಕಾಲ ಚೆಲ್ಲಾಟವಾಡಿದರೆ, ಅದು ಅದರಲ್ಲೇ ಪ್ರಬುದ್ಧತೆಯನ್ನು ಪಡೆಯಬಹುದೇ? ಭಾರತದಲ್ಲಿ ಆರ್ಟ್ ಸಿನೆಮಾ ಎಂದು ಕರೆಸಿಕೊಳ್ಳುವ ಚಿತ್ರಗಳು, ನಮ್ಮ ಒಂದು ಸಾಮಾನ್ಯ ವಿಷಯವಾದ  ಬಡತನವನ್ನು (ಅನೇಕ ಇವೆ. ಅದರಲ್ಲಿ ಇದೊಂದನ್ನು ಮಾತ್ರ ನಾನು ಮಾತನಾಡುತ್ತಿದ್ದೇನೆ. ಉಳಿದದ್ದಕ್ಕೂ ಸಮೀಕರಿಸಿ ನೋಡಿಕೊಳ್ಳಬಹುದು ಇದೇ ವಾದವನ್ನು) ಹಸಿವನ್ನು ಬಳಸಿಕೊಂಡಿರುವ ರೀತಿಯಲ್ಲಿ ನಾವು ಈ ಪ್ರಬುದ್ಧತೆಯನ್ನು ಕಾಣುತ್ತೇವೆಯೇ? ಈ ಪ್ರಶ್ನೆ ನನಗೆ ಉದಯಿಸಿದ್ದು ಇತ್ತೀಚೆಗೆ ನಾನು ನೋಡಿದ ಒಂದು ಹಾಲಿವುಡ್ ಸಿನೆಮಾದಿಂದ. ಆ ಚಿತ್ರದ ಹೆಸರು ಡಿಸ್ಟ್ರಿಕ್ಟ್ ೯. ಅಮೇರಿಕದ ಚಿತ್ರರಂಗದಲ್ಲಿ ಬಡತನ, ಹಸಿವು, ಕಾಮ ಇತ್ಯಾದಿಗಳನ್ನು ಮೀರಿದ ಒಂದು ತುಡಿತವನ್ನು ನಾವು ಹಲವು ಬಾರಿ ಕಾಣುತ್ತೇವೆ. ಅವರಿಗೆ ಇಹ ಲೋಕ ಬಿಟ್ಟು ಬಾಹ್ಯ ಲೋಕದ ಕುರಿತಾಗಿ ಇರುವ ಕುತೂಹಲ ಅದು. ಬಾಹ್ಯ ಲೋಕದ ಜೀವಿಗಳ ಚಿತ್ರಗಳ ಸರಣಿಯೇ ಅಲ್ಲಿವೆ. ಇಟಿ ಇರಬಹುದು, ಇನ್ಡಿಪೆಂಡೆನ್ಸ್ ಡೇ ಇರಬಹುದು, ಮೆನ್ ಇನ್ ಬ್ಲಾಕ್ ಇರಬಹುದು… ಹೀಗೆ ಅನೇಕ ಚಿತ್ರಗಳ ಪಟ್ಟಿ ನಿಮ್ಮ ಬಳಿಯೂ ಖಂಡಿತಾ ಇದೆ. ಇವೆಲ್ಲವುಗಳಿಗಿಂತ ಭಿನ್ನವಾಗಿ ಈ ಚಿತ್ರ ನಿಲ್ಲುತ್ತದೆ. ಇದು ನನಗೆ ಕುತೂಹಲವನ್ನು ಮೂಡಿಸಿದ್ದರಿಂದ ನಾಲ್ಕು ಮಾತು ಇಲ್ಲಿ…

ಅದ್ಯಾವುದೋ ಕಾಲ ಘಟ್ಟದ ಮಾತು ಈ ಚಿತ್ರದಲ್ಲಿ ಇದೆ. ಅದೊಂದಾನೊಂದು ಕಾಲ ಎನ್ನಬಹುದೋ ಏನೋ ಅದನ್ನು! ಅಂಥಾ ಕಾಲದಲ್ಲಿ ಬಾಹ್ಯ ಲೋಕದ ಜೀವಿಗಳು ಬಂದು ಭೂಮಿಯಲ್ಲಿ ಸಹಸ್ರ ಸಂಖ್ಯೆಗಳಲ್ಲಿ ಸಿಕ್ಕಿಕೊಂಡಿವೆ. ಅವುಗಳು ಆಫ್ರಿಕಾದಲ್ಲಿ ಬಂದು ನೆಲೆಸಿವೆ. ಅಲ್ಲಿನ ಜನರು ಈ ಜೀವಿಗಳನ್ನು ಒಂದು ಜಾಗದಲ್ಲಿ ವಾಸಿಸುವಂತೆ ಮಾಡಿ (ನಿರಾಶ್ರಿತರ ಕ್ಯಾಂಪುಗಳು!) ಆ ಸ್ಥಳವನ್ನು ಒಂಭತ್ತನೇ ಜಿಲ್ಲೆ ಎಂದು ಕರೆಯುತ್ತಾರೆ. ಭೂಮಿಯ ಜನರೆಲ್ಲರ ಉಗಮ ಸ್ಥಾನ ಎಂದೇ ನಂಬಲಾದ ಆ ಸ್ಥಳದಲ್ಲಿ ಬಂದು ನೆಲೆಸುವ ಬಾಹ್ಯ ಲೋಕದ ಜೀವಿಗಳ ಕಲ್ಪನೆಯೇ ಮೊದಲಿಗೆ ನನಗೆ ಮುದ ನೀಡಿತು. ಮತ್ತೆ ಆಫ್ರಿಕಾದಲ್ಲಿ ನಡೆಯುತ್ತಿದ್ದ, ಇರುವ ಜನಾಂಗೀಯ ಸಮಸ್ಯೆಗಳು, ರಾಜಕೀಯ ಸಮಸ್ಯೆಗಳಿಗೆ ಒಂದು ಕನ್ನಡಿ ಹಿಡಿದಂತೆ ಈ ಚಿತ್ರ ಸಾಗುತ್ತದೆ. ಅಲ್ಲಿ ಸಿಲುಕಿಕೊಂಡಿರುವ ಬಾಹ್ಯಲೋಕದ ಜೀವಿಗಳಿಗೆ ಒಂದು ವಲಯವನ್ನು ನಿರ್ಮಿಸಿ ಅವರನ್ನು ನಮ್ಮ ಸಮಾಜದ ಚೌಕಟ್ಟಿನೊಳಗೆ ತರುವ ಪ್ರಯತ್ನ, ಅದರಲ್ಲಿ ಮಾನವರ ವೈಫಲ್ಯ ಇದರಿಂದ ಆಗುವ ಅನಾಹುತಗಳ ಸುತ್ತ ಈ ಚಿತ್ರ ತಿರುಗುತ್ತಾ ಒಂದು ಸಂಸಾರದ ಕಥೆಯನ್ನು ಹೇಳುತ್ತದೆ.

ಆದರೆ ಇಲ್ಲಿನ ವಿಶೇಷವೆಂದರೆ, ಈ ಚಿತ್ರವು ಬಾಹ್ಯಾಕಾಶದಿಂದ ಬರುವ ಜೀವಿಗಳ ಕುರಿತಾದ ಮೂಲಭೂತ ಕುತೂಹಲದ ಭಾಗವನ್ನು ತೊರೆದು ಮುಂದುವರೆಯುತ್ತದೆ. ಅದು ಅವರನ್ನು ನಮ್ಮದೇ ಸಮಾಜದೊಳಗಿನ ಒಂದು ಭಿನ್ನ ಭಾಗ ಎನ್ನುವಂತೆ ಭಾವಿಸಿ ಕಥೆಯನ್ನು ಮುಂದೆ ತೆಗೆದುಕೊಂಡು ಹೋಗುತ್ತದೆ. ಇದಕ್ಕಾಗಿ ಒಂದು ರಹಸ್ಯ ಬಯಲು ಮಾಡುವ ಟಿವಿ ಕಾರ್ಯಕ್ರಮದಂತೆ ಚಿತ್ರದ ಮೊದಲ ಭಾಗ ನಡೆಯುತ್ತದೆ. ಅಲ್ಲಿ ಕ್ಯಾಮರಾ ಒಂದು ಟಿ.ವಿ ಕ್ಯಾಮರಾದಂತೆ ವರ್ತಿಸುವುದು – ಅಂದರೆ ಎದುರಿಗಿರುವವನು ಮೈಕ್ ಹಿಡಿದು ಕ್ಯಾಮರಾಕ್ಕೆ, ಆ ಮೂಲಕ ಸಿನೆಮಾ ಪ್ರೇಕ್ಷಕರಿಗೆ ವಿವರಣೆ ನೀಡುತ್ತಾ, ಪ್ರಾತ್ಯಕ್ಷಿಕೆ ನೀಡುತ್ತಾ ಸಾಗುವ ಕ್ರಮ – ಇಡೀ ಚಿತ್ರಕ್ಕೆ ಒಂದು ರಿಯಾಲಿಟೀ ಶೋ ರೂಪವನ್ನೂ ಕೊಡುತ್ತದೆ.

ಹೀಗೆ ಆ ಚಿತ್ರವನ್ನು ನೋಡುತ್ತಾ ಹೋದಂತೆ ನನಗೆ ಮತ್ತೆ ಮತ್ತೆ ಅನಿಸಿದ್ದು ಒಂದೇ. ಹಾಲಿವುಡ್ ಇಂದು ಏಲಿಯನ್ಸ್ (ಬಾಹ್ಯ ಲೋಕದ ಜೀವಿಗಳು) ಕುರಿತಾದ ಒಂದು ಕೌತುಕವನ್ನು ಮೀರಿ ಸಾಧ್ಯತೆಗಳನ್ನು ಯೋಚಿಸುತ್ತಿರುವುದು ಒಂದು ಬೆಳೆಯುತ್ತಿರುವ ಅಲ್ಲಿನ ಸಿನೆಮಾ ಸಂಸ್ಕೃತಿಯ ಸಂಕೇತವೇ ಎಂದು ಯೋಚಿಸುತ್ತಿದ್ದೆ. ಹಾಗಾದರೆ ಈ ಸಮೀಕರಣದಲ್ಲಿ ನಮ್ಮ ಚಿತ್ರಗಳು ಎಲ್ಲಿವೆ ಎಂಬ ಆತ್ಮ ವಿಮರ್ಶೆ ಮತ್ತೆ ಎದ್ದಿತ್ತು ನನ್ನ ಮನಸಲ್ಲಿ. ಹಾಂ! ಅದೇ ಸಮಯಕ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾದ, ಕನ್ನಡ ಚಿತ್ರ ಮನಸಾರೆ ಕುರಿತು ಒಂದೆರಡು ಮಾತು ಹೇಳಬಹುದು. ‘ಮುಂಗಾರು ಮಳೆ’ ಗೆದ್ದಾಗ ಯೋಗರಾಜರು ಇನ್ನು ತಮ್ಮ ಮಾಧ್ಯಮದಲ್ಲಿ ಪ್ರಯೋಗಕ್ಕೆ ಆರಂಭಿಸುತ್ತಾರೆ ಎಂದು ನಾನು ಯೋಚಿಸಿದ್ದೆ. ಆದರೆ ಗಾಳಿಪಟದಲ್ಲಿ ಮತ್ತೆ ಅದೇ ಮುಂಗಾರು ಮಳೆಯ ಪ್ರಯೋಗಗಳೇ ಮುಂದುವರೆದವು. ಹೀಗಾಗಿ ನಾನು ಕೊಂಚ ಬೇಸರಿಸಿದ್ದೆ. ಆದರೆ ಮನಸಾರೆಯ ಮೂಲಕ ಯೋಗರಾಜ ಭಟ್ಟರು ಕನ್ನಡ ಚಿತ್ರರಂಗದ ಆರೋಗ್ಯಕ್ಕೆ ಅವರಂಥಾ ಹಿರಿಯ ನಿರ್ದೇಶಕ ನೀಡಬಹುದಾದ ಚಿಕಿತ್ಸೆಯನ್ನೇ ಚೆನ್ನಾಗಿ ಆರಂಭಿಸಿದ್ದಾರೆ ಅನಿಸಿತು. ಈ ಚಿತ್ರದ ಯಶಸ್ಸು ನಮ್ಮ ಕನ್ನಡ ಚಿತ್ರರಂಗದ ಉಳಿವಿಗೆ ಅಗತ್ಯದ ಯಶಸ್ಸು ಎಂದು ನಾನು ಭಾವಿಸಿದ್ದೇನೆ. ಅದು ಇಲ್ಲವಾದರೆ ಕನ್ನಡ ಚಿತ್ರಗಳು ಮತ್ತದೇ ಲಾಂಗು ಮಚ್ಚು ಸಂಸ್ಕೃತಿಗೆ ಮರಳುತ್ತದೆ ಅಥವಾ ಕಥೆಯೇ ಇಲ್ಲದ ಸೂತ್ರಬದ್ಧ ಚಿತ್ರಗಳಿಗೆ ಜೋತು ಬೀಳುವುದರಲ್ಲಿ ಸಂಶಯವಿಲ್ಲ. ನಮ್ಮ ಚಿತ್ರ ಸಂಸ್ಕೃತಿ ಇನ್ನೂ ಅದನ್ನು ಮೀರದೇ ಇರುವುದು (ಕನಿಷ್ಟ ನಿರ್ದೇಶಕರ ಕಡೆಯಿಂದ) ವಿಚಿತ್ರ ಎನಿಸುತ್ತದೆ ನನಗೆ. ನಿಮಗೇನನಿಸುತ್ತದೆ? ಹೇಳುತ್ತೀರಲ್ಲಾ…?

-ಅಭಯ ಸಿಂಹ

Latest Post

You may also like

0 Comments

Leave a Reply

This site uses Akismet to reduce spam. Learn how your comment data is processed.

%d bloggers like this: