‘ಟಗರು ಪಲ್ಯ’ ಎಂದರೇನು?
ಇಂಥದ್ದೊಂದು ಪ್ರಶ್ನೆ ಚಿತ್ರ ಘೋಷಣೆ ಆದಾಗಿನಿಂದ ಹಲವರನ್ನು ಕಾಡುತ್ತಿದೆ. ಇಷ್ಟಕ್ಕೂ ‘ಟಗರು ಪಲ್ಯ’ ಎಂದರೇನು? ಎಂದು ನಟ-ನಿರ್ಮಾಪಕ ಡಾಲಿ ಧನಂಜಯ್ ಕೊನೆಗೂ ಉತ್ತರಿಸಿದ್ದಾರೆ.
‘ಟಗರು ಪಲ್ಯ’ ಚಿತ್ರವು ಇದೇ ಅಕ್ಟೋಬರ್ 27ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ, ಭಾನುವಾರ ಚಿತ್ರದ ಪ್ರಮೋಷನ್‍ಗಾಗಿ ಧನಂಜಯ್, ವಾಸುಕಿ ವೈಭವ್ ಮತ್ತು ಅಮೃತಾ ಪ್ರೇಮ್, ‘ಬಿಗ್ ಬಾಸ್’ ಕಾರ್ಯಕ್ರಮಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ‘ಟಗರು ಪಲ್ಯ’ ಎಂಬ ಪ್ರಶ್ನೆಯನ್ನು ನಿರೂಪಕ ಸುದೀಪ್ ಸಹ ಧನಂಜಯ್ ಮುಂದಿಟ್ಟರು. ಆಗ ಧನಂಜಯ್ ಉತ್ತರ ನೀಡಿದರು.
‘’ಟಗರು ಪಲ್ಯ’ ಅನ್ನೋದು ನಿರ್ದೇಶಕರು ಇಟ್ಟ ಶೀರ್ಷಿಕೆ. ಸಾಮಾನ್ಯವಾಗಿ, ನಾವು ಮಟನ್ ಚಾಪ್ಸ್ ಅನ್ನುತ್ತೇವಲ್ಲ, ಅದನ್ನು ಕನ್ನಡದಲ್ಲಿ ಟಗರು ಪಲ್ಯ ಎಂದು ಇಟ್ಟರೆ ಹೇಗೆ ಎಂದರು. ಹೆಸರು ಚೆನ್ನಾಗಿತ್ತು. ಹಾಗಂತ ಇದು ಬರೀ ಮಾಂಸಾಹಾರಿಗಳು ನೋಡುವ ಚಿತ್ರ ಮಾತ್ರ ಅಲ್ಲ. ಸಸ್ಯಹಾರಿಗಳು, ಮಾಂಸಾಹಾರಿಗಳು ಎಲ್ಲರೂ ನೋಡುವಂತಹ ಚಿತ್ರ. ಸೆನ್ಸಾರ್‍ನಿಂದ ‘ಯು’ ಪ್ರಮಾಣ ಪತ್ರ ಸಿಕ್ಕಿದೆ. ಇಡೀ ಕುಟುಂಬ ನೋಡಬಹುದಾದಂತಹ ಚಿತ್ರ’ ಎಂದರು ಧನಂಜಯ್.
ಇನ್ನು, ಚಿತ್ರದ ಕಥೆಯ ಕುರಿತು ಮಾತನಾಡುವ ಅವರು, ‘ಇದೊಂದು ಆಚರಣೆಯ ಕಥೆ. ನಾನು ಮೊದಲು ಕಥೆ ಕೇಳಿದಾಗ, ಇಂಥದ್ದೊಂದು ಆಚರಣೆ ನಮ್ಮಲ್ಲಿದೆಯಾ ಎಂಬ ಪ್ರಶ್ನೆ ಬಂತು. ದೇವರಿಗೆ ಕುರಿ ಬಲಿ ಕೊಡುವ ಮೊದಲು, ಅದಕ್ಕೆ ಪೂಜೆ ಮಾಡಿ, ತೀರ್ಥ ಹಾಕಲಾಗುತ್ತದೆ. ಆ ಸಂದರ್ಭದಲ್ಲಿ ಅದು ತಲೆ ಒದರುತ್ತದೆ. ಆಗ ಬಲಿ ಕೊಡಲಾಗುತ್ತದೆ. ತಲೆ ಒದರಲಿಲ್ಲ ಎಂದರೆ ಬಲಿ ಕೊಡುವಂತಿಲ್ಲ. ಅಂಥದ್ದೊಂದು ನಂಬಿಕೆ ನಮ್ಮಲ್ಲಿದೆ. ಆ ನಂಬಿಕೆಯ ಸುತ್ತ ಒಂದು ಅದ್ಭುತವಾದ ಕಥೆಯನ್ನು ಕಟ್ಟಲಾಗಿದೆ. ನಾವು ಸಿನಿಮಾದಲ್ಲಿ ಬಲಿ ಕೊಡುವುದನ್ನು ಪ್ರಮೋಟ್ ಮಾಡಿಲ್ಲ ಮತ್ತು ಅದನ್ನು ತೋರಿಸಿಯೂ ಇಲ್ಲ. ಟಗರು ಇಲ್ಲಿ ದೇವರ ಪಾತ್ರ ಮಾಡಿದೆ’ ಎಂದು ಹೇಳಿದರು.
ಧನ ಮತ್ತು ಜಯ ಇವೆರಡರಲ್ಲಿ ಯಾವುದು, ಎಷ್ಟು ಮುಖ್ಯ ಎಂಬ ಸುದೀಪ್ ಅವರ ಪ್ರಶ್ನೆಗೆ ಉತ್ತರಿಸಿದ ಧನಂಜಯ್, ‘ಧನ ಬಹಳ ಮುಖ್ಯ. ಟಗರು ಬರುವವರೆಗೂ ಒಂದು ಜಯ ಸಿಗಲಿ ಎಂದು ಒದ್ದಾಡುತ್ತಿದ್ದೆ. ಟಗರು ಚಿತ್ರದಲ್ಲಿ ಜಯ ಸಿಕ್ಕಿತು. ಅದರ ನಂತರವೂ ಧನ ಸಿಗುತ್ತಿರಲಿಲ್ಲ. ತುಂಬಾ ಸಿನಿಮಾಗಳಲ್ಲಿ ನಟಿಸುತ್ತಿದ್ದೆ. ಆದರೆ, ಹಣ ಸರಿ ಬರುತ್ತಿರಲಿಲ್ಲ. ನಾನು ಸಹ ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕಿದೆ. ಬಡವ ರಾಸ್ಕಲ್ ಸಮಯದಲ್ಲಿ ಮೂರು ತಿಂಗಳು ಲಾಕ್‍ಡೌನ್ ಆಯಿತು. ಆ ಸಂದರ್ಭದಲ್ಲಿ ನನ್ನ ಬಳಿ ಹೆಚ್ಚು ಹಣ ಇರಲಿಲ್ಲ. ಆಗ ನನಗೆ ದುಡ್ಡಿನ ಮಹತ್ವ ಗೊತ್ತಾಯಿತು. ದುಡ್ಡು ಬಹಳ ಮುಖ್ಯ, ದುಡ್ಡು ಇರಬೇಕು ಅಂತನಿಸಿದ್ದು ಆಗ. ನಾವು ಮಾಡಿದ ಕೆಲಸಕ್ಕೆ ಸರಿಯಾಗಿ ದುಡ್ಡು ಪಡೆಯಬೇಕು. ಬೇರೆಯವರಿಂದು ದುಡ್ಡು ಕಿತ್ತುಕೊಳ್ಳುವುದು ತಪ್ಪು. ಆದರೆ, ನಾವು ಮಾಡಿದ ಕೆಲಸಕ್ಕೆ ದುಡ್ಡು ಪಡೆದಿದ್ದರೆ, ಇಲ್ಲದಿರುವವರಿಗೆ ಸಹಾಯಕ್ಕೆ ಬರೋದು. ಹಾಗಾಗಿ, ಜಯ ಮತ್ತು ಧನ ಬಹಳ ಮುಖ್ಯ’ ಎಂದು ಉತ್ತರಿಸಿದರು.
ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್
0 Comments