ಮನೆಯೊಳಗೆ ಮನೆಯೊಡೆಯನಿಲ್ಲ…

World Cinema

ಝಾಂಗ್ ಯೆಮೂ, ಕಮಿಂಗ್ ಹೋಮ್ ಎನ್ನುವ ಚೈನೀಸ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ೧೯೬೬ರಿಂದ ೧೯೭೬ರರವರೆಗೆ ಚೈನಾದಲ್ಲಿ ನಡೆದ ಕಲ್ಚರಲ್ ರೆವೆಲ್ಯೂಷನ್ ಎನ್ನುವ ಸಾಮಾಜಿಕ / ರಾಜಕೀಯ ಚಳುವಳಿಯ ಹಿನ್ನೆಲೆಯನ್ನು ಇಟ್ಟುಕೊಂಡು ನವಿರಾದ ಒಂದು ಭಾವನೆಗಳ ಕಥೆಯನ್ನು ಈ ಚಿತ್ರ ಬಿಚ್ಚಿಡುತ್ತಾ ಹೋಗುತ್ತದೆ. ಚೈನಾದ ಮೂಲ ಪರಂಪರೆಯನ್ನು ರಕ್ಷಿಸುವ ಸಲುವಾಗಿ ಮಾವೋ ಝೆಡಾಂಗ್ ಆರಂಭಿಸಿದ ಈ ಚಳುವಳಿಯ ಪರಿಣಾಮವಾಗಿ ಈ ಚಳುವಳಿಯ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಅಥವಾ ವಿರೋಧೀಅಭಿಪ್ರಾಯ ಹೊಂದಿದ್ದಾರೆ ಎನ್ನುವ ಕಾರಣಕ್ಕಾಗಿ ಅನೇಕರನ್ನು ಜೈಲಿಗೆ ಹಾಕಲಾಗುತ್ತದೆ. ಹೀಗೆ ಜೈಲಿಗೆ ಹೋದವರಲ್ಲಿ ಲೂ ಯನ್ಶೀ ಕೂಡಾ ಒಬ್ಬ. ಪತ್ನಿ ಹಾಗೂ ಮೂರು ವರ್ಷದ ಮಗಳನ್ನು ಬಿಟ್ಟು ಹೋಗಿರುತ್ತಾನೆ. ಮಗಳು ಸರಕಾರಕ್ಕೆ ನಿಷ್ಟಳಾಗಿ ಬೆಳೆಯುತ್ತಿರುತ್ತಾಳೆ. ಒಮ್ಮೆ ತಂದೆ ಜೈಲಿನಿಂದ ತಪ್ಪಿಸಿಕೊಂಡು ಬಂದಾಗಲೂ ಮಗಳೇ ಆತನನ್ನು ಹಿಡಿದು ಕೊಡುವ ಹೃದಯಸ್ಪರ್ಶಿ ದೃಶ್ಯವೂ ಆಗುತ್ತದೆ. ಅಂತೂ ಕೊನೆಗೆ ಚಳುವಳಿ ಮುಗಿದು ಬಂಧಿತರು ಒಬ್ಬೊಬ್ಬರೇ ಬಿಡುಗಡೆಯಾಗಲಾರಂಭಿಸುತ್ತಾರೆ. ಆಗ ಮನೆಗೆ ಹಿಂದಿರುಗುವ ಲೂ ಯನ್ಶೀಯನ್ನು ಆತನ ಪತ್ನಿ ಗುರುತು ಹಿಡಿಯಲಾರದಾಗುತ್ತಾಳೆ. ಕಮ್ಯೂನಿಸ್ಟ್ ನಾಯಕನೊಬ್ಬ ಸತತವಾಗಿ ಬಲಾತ್ಕಾರಕ್ಕೆ ಒಳಪಡಿಸಿದ್ದರಿಂದ ಆಕೆ ಮಾನಸಿಕವಾಗಿ ಅಸ್ವಸ್ಥಳಾಗಿರುತ್ತಾಳೆ. ಮುಂದೆ ಚಿತ್ರದಲ್ಲಿ ಲೂ ಯನ್ಶೀ ಒಡೆದು ಹೋಗಿರುವ ತನ್ನ ಸಂಸಾರವನ್ನು ಮತ್ತೆ ಜೊತೆಗೂಡಿಸಲು ಪ್ರಯತ್ನಿಸುವ ಮನಃಸ್ಪರ್ಶೀ ಕಥನವಿದೆ. ಆತನ ಪತ್ನಿ ಫೆಂಗ್ ವೆನ್ಯೂ ತನ್ನ ಪತಿ ತನ್ನೆದುರೇ ಇದ್ದರೂ, ಆತನನ್ನು ಗುರುತಿಸದೇ, ತನ್ನ ಪತಿ ಬರುತ್ತಾನೆಂದು ಕಾಯುತ್ತಲೇ ಇರುತ್ತಾಳೆ. ತಾನೇ ಆಕೆಯ ಪತಿ ಎಂದು ಒಪ್ಪಿಸಲು ಹಲವು ಬಾರಿ ಪ್ರಯತ್ನಿಸಿ ವಿಫಲವಾಗುವ ಲೂ ಯನ್ಶೀ, ಕೊನೆಗೆ ಆಕೆಯ ಹುಡುಕಾಟದಲ್ಲಿ ತಾನೂ ಭಾಗಿಯಾಗಿ ತನ್ನದೇ ಹೆಸರಿನ ಬೋರ್ಡ್ ಹಿಡಿದು ರೈಲು ನಿಲ್ದಾಣಾದ ಆಗಮನ ದಾರಿಯಲ್ಲಿ ಕಾಯುವುದರೊಂದಿಗೆ ಚಿತ್ರ ಮುಗಿಯುತ್ತದೆ.
ಲೂ ಯನ್ಶೀಯ ಬಂಧನಕ್ಕೊಳಗಾಗುವ ಮೊದಲಿನ ಜೀವನದ ಸುಳಿವುಗಳು ನಮಗೆ ಚಿತ್ರದುದ್ದಕ್ಕೂ ಸಿಗುತ್ತಾ ಹೋಗುತ್ತದೆ. ಆತ ಒಬ್ಬ ಉಪನ್ಯಾಸಕನಾಗಿದ್ದ, ಉದಾತ್ತ ಮನಸ್ಸಿನವನಾಗಿದ್ದ, ಪಿಯಾನೋ ಬಾರಿಸುವುದರಲ್ಲಿ ಪರಿಣತಿ ಹೊಂದಿದ್ದ ಹೀಗೆ ಲೂ ಯನ್ಶೀಯ ಪಾತ್ರದ ಪರಿಚಯ ನಮಗೆ ಆಗುತ್ತದೆ. ತನ್ಮೂಲಕ ಆತನನ್ನು ಪ್ರೇಕ್ಷಕರು ಮೆಚ್ಚುವಂತಾಗುತ್ತದೆ. ಸಾಮಾಜಿಕ ಚಳುವಳಿ, ರಾಜಕೀಯ ನಿರ್ಧಾರಗಳು ಹೇಗೆ ಅನೇಕ ಜೀವನಗಳ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಮನೋಜ್ಞವಾಗಿ ಈ ಚಿತ್ರ ಹಿಡಿದಿಡುತ್ತದೆ.
ಈ ಚಿತ್ರದಲ್ಲಿ, ಇಲ್ಲವೇನೋ ಎನ್ನುವಷ್ಟು ಕಡಿಮೆ ಸಂಗೀತದ ಬಳಕೆಯಾಗಿದೆ. ಬಂದಾಗಲೂ, ತನ್ನ ಹಿರಿಮೆಯನ್ನು ಮೆರೆಯದೇ ಸಂಗೀತ ಹಾದು ಹೋಗುತ್ತದೆ. ಕಂದು ಬಣ್ಣದ, ಬೂದು ಬಣ್ಣಗಳ ಬಳಕೆ ಹಾಗೂ ಅದಕ್ಕೆ ಅನುರೂಪವಾದ ಬೆಳಕಿನ ಸಂಯೋಜನೆಯಿಂದ
ಚಿತ್ರದಲ್ಲಿ ಒಂದು ಮಬ್ಬು ವಾತಾವರಣವನ್ನು ಛಾಯಾಗ್ರಾಹಕ ರೂಪಿಸಿದ್ದಾರೆ. ಚಿತ್ರದಲ್ಲಿ, ಜೈಲಿನಿಂದ ಓಡಿಬಂದ ಲೂ ಯನ್ಶೀ ತನ್ನ ಪತ್ನಿಯನ್ನು ನೋಡಲು ಮನೆಗೆ ಬರುವ ಒಂದು ದೃಶ್ಯವಿದೆ, ಮೆನೆಯೆದುರು ನಿಂತಿರುವ ಪಹರೆಯವನ ಕಣ್ಣು ತಪ್ಪಿಸಲು ಯಾವುದೇ ಬಾಗಿಲಿನಿಂದ ಒಳ ಹೊಕ್ಕು, ಇನ್ಯಾವುದೋ ತಾರಸಿ ಏರಿ, ಮತ್ಯಾವುದೋ ಏಣಿಯಲ್ಲಿ ಇಳಿದು ಬರುವ ಲೂ ಯಾನ್ಶೀ, ಬಾಗಿಲನ್ನು ಮೆಲ್ಲನೆ ತಟ್ಟಲು, ಮನೆಯೊಳಗೆ ಇರುವ ಪತ್ನಿಗೆ ಕೂಡಲೇ ಲೂ ಯಾನ್ಶೀ ಬಾಗಿಲ ಹೊರಗಿದ್ದಾನೆ ಎಂದು ತಿಳಿಯುತ್ತದೆ. ಬಾಗಿಲು ತೆರೆದರೆ, ಪತಿ ಸಿಗುತ್ತಾನೆ, ಆದರೆ ಅಧಿಕಾರಿಗಳ ಒತ್ತಡದಿಂದ ಮಗಳ ಬಾಳು ಸದಾಕಾಲಕ್ಕೆ ಹಾಳಾಗುತ್ತದೆ ಈ ಗೊಂದಲದಲ್ಲಿ ಬಾಗಿಲು ತೆರೆಯದಾಗುತ್ತಾಳೆ ಪತ್ನಿ. ಆಗಲೇ ಅಲ್ಲಿಗೆ ಬರುವ ಮಗಳು, ತಂದೆಯನ್ನೇ ಹಿಡಿದು ಕೊಡುತ್ತಾಳೆ. ಇಡೀ ಚಿತ್ರದ ಮುಖ್ಯ ಘಟನೆಯೊಂದು ಬಹಳ ಚೆನ್ನಾಗಿ ಚಿತ್ರಿತವಾಗಿದ್ದು, ಅದರಲ್ಲಿ ಇಡೀ ಚಿತ್ರದ ಮುಂದಿದ ಸಂಘರ್ಷವನ್ನು ರೂಪಿಸಿಕೊಡುವಲ್ಲಿ ಚಿತ್ರದ ಬರವಣಿಗೆ ಹಾಗೂ ನಿರ್ದೇಶಕರ ಸತ್ವದ ಪರಿಚಯ ನಮಗಾಗುತ್ತದೆ.
ನಿಂತು ಹೋದ ಜೀವನದ, ಕಳೆದು ಹೋದ ಕಾಲದ ಸೂಚಕವೋ ಎನ್ನುವಂತೆ ಉದುರಿ ಬಿದ್ದ ಎಲೆಗಳ ರಾಶಿ, ಜೀವನದ ಸ್ಥಬ್ಧಚಿತ್ರಗಳೇನೋ ಎನ್ನುವಂಥಾ ಪೋಷಕ ಪಾತ್ರಗಳನ್ನು ಬಳಸಲಾಗಿದೆ. ಸಾಮಾಜಿಕ ಹಿನ್ನೆಲೆಯ ದಟ್ಟತೆಯನ್ನು ತೋರಿಸುತ್ತಿದ್ದರೂ, ಪಾತ್ರಗಳನ್ನು ಆ ಹಿನ್ನೆಲೆಯ ಎದುರು ಹಿಡಿದಿರುವ ಕಟೌಟ್ ರೀತಿಯಲ್ಲಿ ಬಳಸಿಕೊಳ್ಳಲಾಗಿದೆ. ನಿಧಾನ ಗತಿಯಲ್ಲಿ ಚಲಿಸುವ ಚಿತ್ರ, ಅಮ್ನೀಶಿಯಾ ಕುರಿತು ಬಂದಿರುವ ನೂರಾರು ಚಿತ್ರಗಳಲ್ಲಿ ಬಳಕೆಯಾಗಿರುವ ಅನೇಕ ಕ್ಲೀಶೇಗಳಿಂದ ಸ್ವಲ್ಪದರಲ್ಲೇ ತಪ್ಪಿಸಿಕೊಳ್ಳುತ್ತಾ ಸಾಗುತ್ತದೆ. ಪತಿ-ಪತ್ನಿಯರ ನಡುವಿನ ಪ್ರೀತಿ, ತಂದೆಯನ್ನು ತನ್ನ ಮೂರನೇ ವರ್ಷದ ನಂತರ ನೋಡೇ ಇಲ್ಲದ, ಭಿನ್ನ ಪರಿಸರದಲ್ಲಿ ಬೆಳೆಯುವ ಮಗಳು ತಂದೆಯನ್ನು ಒಪ್ಪಿಕೊಳ್ಳುವ ರೀತಿ ಹೀಗೆ ಭಾವನೆಗಳ ಸಮುದ್ರದಲ್ಲಿ ಅಲೆಗಳಾಗಿ ಪ್ರೇಕ್ಷಕರ ಮನಸ್ಸಿಗೆ ಮತ್ತೆ ಮತ್ತೆ ಬಂದಪ್ಪಳಿಸಿ ನೆನಪಿನಲ್ಲಿ ಉಳಿಯುವ ಚಿತ್ರವಾಗಿ ಕಮಿಂಗ್ ಹೋಮ್ ನಿಲ್ಲುತ್ತದೆ.
– ಅಭಯ ಸಿಂಹ
Latest Post

You may also like

0 Comments

Leave a Reply

This site uses Akismet to reduce spam. Learn how your comment data is processed.

%d bloggers like this: