ಕಳೆದ ವರ್ಷ ಪ್ರಾರಂಭವಾಗಿದ್ದ ಚಿಕ್ಕಣ್ಣ ಅಭಿನಯದ ‘ಉಪಾಧ್ಯಕ್ಷ’ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ಆಗಲಿದ್ದು, ಅದಕ್ಕೂ ಮುನ್ನ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ‘ಅಧ್ಯಕ್ಷ’ ಚಿತ್ರದ ಸೀಕ್ವೆಲ್ ಆಗಿರುವ ‘ಉಪಾಧ್ಯಕ್ಷ’ನ ಟೀಸರ್ ಬಿಡುಗಡೆ ಮಾಡುವುದಕ್ಕೆ ‘ದುನಿಯಾ’ ವಿಜಯ್, ‘ನೆನಪಿರಲಿ’ ಪ್ರೇಮ್, ಅಭಿಷೇಕ್ ಅಂಬರೀಶ್, ಅದಿತಿ ಪ್ರಭುದೇವ, ಧನ್ವೀರ್, ಪ್ರಥಮ್ ಮುಂತಾದವರು ಬಂದಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಚಿಕ್ಕಣ್ಣ, ‘ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡ ಎಂದು ’ದುನಿಯಾ’ ವಿಜಿ ಸಾರ್ ಹೇಳುತ್ತಿದ್ದರು. ತಲೆ ಕೆಡಿಸಿಕೊಳ್ಳಬೇಡ, ಚೆನ್ನಾಗಿಲ್ಲ ಅನ್ನಬಹುದು ಅಂತ. ನಿಜ ಹೇಳಬೇಕೆಂದರೆ, ನಾನು ಚಿತ್ರತಂಗಕ್ಕೆ ಬಂದ ಮೇಲೆ ಕಷ್ಟವನ್ನೇ ನೋಡಿಲ್ಲ. ಕಾಮಿಡಿಯನ್ ಆದ್ಮೇಲೆ ಬಹಳ ಆರಾಮಾಗಿದ್ದೆ. 13 ವರ್ಷ ನೋಡದಿರುವ ಕಷ್ಟವನ್ನು ಇದೊಂದು ಸಿನಿಮಾದಲ್ಲಿ ನೋಡಿಬಿಟ್ಟೆ. ಸಾಕಷ್ಟು ಅವಮಾನಗಳನ್ನು ಎದುರಿಸಿದೆ. ಜೊತೆಗಿರುವವರೇ ಏನೇನೋ ಮಾತಾಡಿದರು. ಇವನು ಹೀರೋನಾ? ಇವನಿಗೆ ಬೇಕಿತ್ತಾ? ಎಂದರು. ಏನು ಹೇಳಬೇಕೋ ನನಗೆ ಗೊತ್ತಿಲ್ಲ. ಜನ ಇಲ್ಲಿಯವರೆಗೂ ಕರೆದುಕೊಂಡು ಬಂದಿದ್ದಾರೆ. ಚಪ್ಪಾಳೆ ಹೊಡೆದು, ಪ್ರೋತ್ಸಾಹಿಸಿದ್ದಿಕ್ಕೆ ನಾನು ‘ಉಪಾಧ್ಯಕ್ಷ ಎನ್ನುವ ಸಿನಿಮಾ ಮಾಡುವುದಕ್ಕೆ ಸಾಧ್ಯವಾಯ್ತು. ಯಾರು ಏನಂದುಕೊಂಡರೂ ಪರವಾಗಿಲ್ಲ. ಹೀರೋಯಿನ್ ಶಾರುಖ್ ಖಾನ್ ಅಂತಾಳೆ’ ಎಂದು ಭಾವುಕರಾದರು.
ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ ಅವರ ಬಗ್ಗೆ ಮಾತನಾಡಿದ ಚಿಕ್ಕಣ್ಣ, ‘ಬಹಳಷ್ಟು ಕಾಮಿಡಿ ನಟರು ಹೀರೋ ಆಗಿದ್ದೀವಿ. ಆದರೆ, ನನಗೆ ಸಿಕ್ಕಷ್ಟು ದೊಡ್ಡ ಚಿತ್ರ ಬೇರೆ ಯಾರಿಗೂ ಸಿಕ್ಕಿಲ್ಲ. ಅದು ನನ್ನ ಪುಣ್ಯ. ನಿರ್ಮಾಪಕರು ಚಿತ್ರಕ್ಕೆ ಎಲ್ಲೂ ಕಡಿಮೆ ಆಗದಂತೆ ನೋಡಿಕೊಂಡಿದ್ದಾರೆ. ನನ್ನ ಮಾರ್ಕೆಟ್ ಬಗ್ಗೆ ಗೊತ್ತಿಲ್ಲ. ನಗೆನಟನಾಗಿ ಗುರುತಿಸಿಕೊಂಡಿರಬಹುದು. ಆದರೆ, ಹೀರೋ ಆಗಿ ಮಾಡಿದಾಗ, ಜನ ಬರ್ತಾರಾ? ಎಷ್ಟು ವ್ಯಾಪಾರ ಆಗುತ್ತೆ? ಅಂತ ತಲೆ ಕೆಡಿಸಿಕೊಳ್ಳದೇ, ಸಿನಿಮಾ ಚೆನ್ನಾಗಿ ಮಾಡಿದರೆ ಜನ ಕೈಬಿಡುವುದಿಲ್ಲ ಎಂಬ ನಂಬಿಕೆಯಿಂದ ಚಿತ್ರವನ್ನು ಬಹಳ ಅದ್ಧೂರಿಯಾಗಿ ಮಾಡಿದ್ದಾರೆ. ನನಗೆ ಇದು ಬಹಳ ದೊಡ್ಡ ಬಜೆಟ್‍ನ ಸಿನಿಮಾ’ ಎಂದರು.
ನಾನು ಕೆಲಸದೊತ್ತಡದಿಂದ ಚಿತ್ರೀಕರಣ ಸ್ಥಳಕ್ಕೆ ಹೋಗುತ್ತಿರಲಿಲ್ಲ ಎಂದ ಉಮಾಪತಿ ಶ್ರೀನಿವಾಸ್ ಗೌಡ, ‘ಚಿತ್ರತಂಡದವರೆ ಎಲ್ಲವನ್ನೂ ನೋಡಿಕೊಂಡಿದ್ದಾರೆ. ಇದು ‘ಅಧ್ಯಕ್ಷ’ ಚಿತ್ರದ ಮುಂದುವರೆದ ಭಾಗ. ಚಂದ್ರ ಮೋಹನ್ ಕಥೆ ಬರೆದಿದ್ದಾರೆ. ಚಿತ್ರಕಥೆಗೆ ನಿರ್ದೇಶಕರಾದ ಡಾ ಸೂರಿ, ತರುಣ್ ಸುಧೀರ್ ಮುಂತಾದವರು ಸಹಾಯ ಮಾಡಿದ್ದಾರೆ. ನವೆಂಬರ್‍ನಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು.
ಸರಸ್ವತಿ ಬಿಟ್ಟು ಲಕ್ಷ್ಮೀ ಹಿಂದೆ ಹೋಗಿ ತಪ್ಪು ಮಾಡಿಬಿಟ್ಟೆ: ಅಣಜಿ ನಾಗರಾಜ್
0 Comments