ಸ್ವರಗಳ ಮಿಲನ ಭಾವಗಳ ಮೇಳಕ್ಕೆ!

Blog, screen

ತೊಂಭತ್ತರ ದಶಕದಲ್ಲಿ ದೂರದರ್ಶನದ ಪ್ರೇಕ್ಷಕರಿಗೆ ಮರೆಯಲಾಗದ ಅನೇಕ ಕಾರ್ಯಕ್ರಮಗಳಲ್ಲಿ ಒಂದು ‘ಮಿಲೇ ಸುರ್ ಮೆರಾ ತುಮ್ಹಾರ’ ಎಂಬ ಐದು ನಿಮಿಷದ ಗೀತೆಯೂ ಒಂದು. ಇಂದು, ಇದೇ ಜನವರಿ ೨೬ಕ್ಕೆ ಅದೇ ಗೀತೆಯ ಹೊಸ ರೂಪ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ ಎಂದು ಕೇಳಿ ಮತ್ತೊಮ್ಮೆ ಮೂಲ ಹಾಡಿನ ಜಾಡು ಹಿಡಿದು ನಡೆದೆ ನಾನು. ಇದರ ಕಿರುಪರಿಚಯ ತಮಗೂ ಇಲ್ಲಿದೆ.

ಮೊದಲ ಬಾರಿಗೆ ೧೯೮೮ರ ಆಗಸ್ಟ್ ೧೫ರಂದು ದೆಹಲಿಯ ಕೆಂಪು ಕೋಟೆಯ ಮೇಲಿನಿಂದ ಪ್ರಧಾನಿಯವರ ಭಾಷಣದ ನೇರ ಪ್ರಸಾರ ಮುಗಿಯುತ್ತಿದ್ದಂತೆಯೇ ಮೊದಲ ಬಾರಿಗೆ ದೂರದರ್ಶನದಲ್ಲಿ ಸುಮಾರು ಐದು ನಿಮಿಷದ, ‘ಮಿಲೆ ಸುರ್ ಮೆರಾ ತುಮ್ಹಾರ’ (ಇದನ್ನು ‘ಎಕ್ ಸುರ್’ ಎಂದೂ ಕರೆಯಲಾಗುತ್ತದೆ) ಪ್ರಸಾರವಾಯಿತು. ಭಾರತದ ಹದಿನಾಲ್ಕು ಭಾಷೆಗಳಲ್ಲಿ (ಕನ್ನಡವೂ ಇದರಲ್ಲಿ ಸೇರಿದೆ) ನನ್ನ ಧ್ವನಿಗೆ ನಿಮ್ಮ ಧ್ವನಿಯ ಸೇರಿದಂತೆ ನಮ್ಮ ಧ್ವನಿಯು ಎನ್ನುವ ವಾಕ್ಯವನ್ನು ಪುನರುಚ್ಛರಿಸಲಾಗಿದೆ. ಭಾರತದ ವೈವಿಧ್ಯದಲ್ಲಿ ಏಕತೆ ಎನ್ನುವ ಮೂಲ ಕಲ್ಪನೆಯನ್ನು ಇಟ್ಟುಕೊಂಡು ಚಿತ್ರೀಕರಿಸಿರುವ ಈ ಗೀತೆಯನ್ನು ನೋಡುವುದು ಇಂದಿಗೂ ಮನೋಹರ ಅನುಭವ.

ದೂರದರ್ಶನವೋಂದೇ ಪ್ರಮುಖ ವಾಹಿನಿಯಾಗಿದ್ದ ಆ ಕಾಲದಲ್ಲಿ ಸರಕಾರವು ಜನತೆಗೆ ವಿವಿಧ ಸಂದೇಶಗಳನ್ನು ತಲುಪಿಸಲು ಐದು ನಿಮಿಷದ ಅನೇಕ ಕಿರು ಚಿತ್ರಗಳನ್ನು ತಯಾರಿಸುತ್ತಿತ್ತು. ‘ಏಕ್ ತಿತ್ಲೀ ಅನೇಕ್ ತಿತ್ಲಿಯಾಂ…’ ಹೀಗೆ ಆರಂಭವಾಗುತ್ತಿದ್ದ ಸಂದೇಶವೂ ನಿಮಗೆ ನೆನಪಿರಬಹುದು. ಹೀಗೆ ಆ ಕಾಲದಲ್ಲಿ ಭಾರತದಲ್ಲಿ ಲಭ್ಯವಾಗಿದ್ದ ಅತ್ಯುತೃಷ್ಟ ನಿರ್ಮಾಣದಲ್ಲಿ ದೂರದರ್ಶನ ಚಿತ್ರಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಇಂದು ದೂರದರ್ಶನದಲ್ಲಿ ಆ ಹೊಳಪು ಕಾಣೆಯಾಗಿರುವುದು ಬೇಸರ ತರಿಸುತ್ತದೆ. ಇಂದು ನೂರಾರು ದೃಶ್ಯ ವಾಹಿನಿಗಳು ನಮ್ಮ ದೇಶದಲ್ಲಿ ಕೆಲಸ ಮಾಡುತ್ತಿದ್ದು, ಇಡೀ ಕೆರೆಯೇ ಬಗ್ಗಡವಾಗಿದೆ. ವಾಹಿನಿಯಲ್ಲಿ ಶಿಷ್ಟತೆ ಮಾಯವಾಗುತ್ತಿದೆ. ಹೀಗೆ ಮುಸುಕಿದೀ ಮಬ್ಬಿನಲಿ, ಮತ್ತೊಮ್ಮೆ ಹಳೆಯ ನೆನಪು ಹುಟ್ಟುವಂತೆ ‘ಮಿಲೇ ಸುರ್ ಮೇರಾ ತುಮ್ಹಾರ’ ರೂಪುಗೊಳ್ಳುತ್ತಿರುವುದು ನಿಜಕ್ಕೂ ಆಹ್ಲಾದಕರ.

ಮೂಲ ಗೀತೆಯ ಚಿತ್ರದಲ್ಲಿ, ಆ ಕಾಲದ ಅನೇಕ ದಿಗ್ಗಜ ಕಲಾವಿದರು ಈ ಗೀತೆಯನ್ನು ರೂಪಿಸುವಲ್ಲಿ ಕೆಲಸ ಮಾಡಿದ್ದರು. ಅಮಿತಾಬ್ ಬಚ್ಚನ್, ಮಿಥುನ್ ಚಕ್ರವರ್ತಿ, ಕಮಲಾ ಹಾಸನ್, ರೇವತಿ, ಜಿತೇಂದ್ರ, ವಹಿದಾ ರೆಹಮಾನ್, ಹೇಮಾ ಮಾಲಿನಿ, ತನುಜ, ಶರ್ಮಿಳಾ ಟಾಗೋರ್, ಶಬನಾ ಅಝ್ಮಿ, ಓಂ ಪುರಿ, ಮೀನಾಕ್ಷಿ ಶೇಶಾದ್ರಿ, ಮಲ್ಲಿಕಾ ಸಾರಾಬಾಯ್, ಮೃಣಾಲ್ ಸೇನ್, ಭೀಮ್ ಸೇನ್ ಜೋಶಿ, ಬಾಲ ಮುರಳೀ ಕೃಷ್ಣ, ಲತಾ ಮಂಗೇಶ್ಕರ್, ನರೇಂದ್ರ ಹೀರ್ವಾನಿ, ಪ್ರಕಾಶ್ ಪಡುಕೋಣೆ, ಅರುಣ್ ಲಾಲ್, ಸಯ್ಯದ್ ಕೀರ್ಮಾನಿ ಹೀಗೆ ಅನೇಕ ಅಥಿರಥ ಮಹಾರಥರು ಈ ಐದು ನಿಮಿಷದಲ್ಲಿ ಹಾದು ಹೋಗುತ್ತಾರೆ. ಮೊದಲ ಬಾರಿಗೆ ಪ್ರಸಾರವಾಗುತ್ತಲೇ ಭಾರತದಾದ್ಯಂತ ಜನಪ್ರಿಯತೆಯನ್ನು ಗಳಿಸಿದ ಈ ಗೀತೆಗೆ ಲೂಯಿಸ್ ಬಾಂಕ್ಸ್ ಸಂಗೀತ ಸಂಯೋಜನೆ ಇದ್ದು, ಪೀಯೂಶ್ ಪಾಂಡೆ ಸಾಹಿತ್ಯ ರಚಿಸಿದ್ದಾರೆ. ಸುರೇಶ್ ಮಲ್ಲಿಕ್ ನಿರ್ದೇಶನ ಮಾಡಿದ್ದಾರೆ ಹಾಗೂ ಲೋಕ್ ಸೇವಾ ಸಂಚಾರ್ ಪರಿಷದ್ ಇದರ ನಿರ್ಮಾಪಕರು.

ಇಂದು ಮತ್ತೆ ಈ ಗೀತೆ ರೂಪಗೊಳ್ಳುತ್ತಿದೆ. ಈ ಹೊಸ ರೂಪದಲ್ಲಿ, ಶಂಕರ್ – ಎಹೆಸಾನ್ – ಲೋಯ್ ಸೇರಿದಂತೆ ಅನೇಕ ಯುವ ಪೀಳಿಗೆಯ ಸಂಗೀತಕಾರರು ಇಂದಿನ ಭಾರತದ ಮುಖವಾಗಲಿದ್ದಾರೆ. ಹೊಸ ರೂಪದಲ್ಲಿ ಚಿತ್ರೀಕರಣವಾಗಿ, ನಮ್ಮೆದುರು ಇದೇ ತಿಂಗಳಲ್ಲಿ ಬರಲಿದೆ ಹೊಸ ‘ಮಿಲೇ ಸುರ್ ಮೇರಾ ತುಮ್ಹಾರ’ ಬನ್ನಿ ಮತ್ತೆ ಜತೆಗೂಡಿಸೋಣ ಸ್ವರಗಳನ್ನು ಒಗ್ಗಟ್ಟಾಗಿ ನುಗ್ಗೋಣ ಹೊಸ ಭಾರತವನ್ನು ರೂಪಿಸುವಲ್ಲಿ ನಮ್ಮ ಕೊಡುಗೆಯನ್ನು ಕೊಡೋಣ.

Latest Post

You may also like

ಸಂಕಲನಕಾರ in ಸಂಕಟ!

ಪ್ರತಿಯೊಂದು ಚಿತ್ರಕ್ಕೂ ಒಬ್ಬ ಸಂಕಲನಕಾರನ ಅಗತ್ಯವಿರುತ್ತದೆ. ಏನಿವನ ಕೆಲಸ? ಒಟ್ಟಾರೆಯಾಗಿ ಚಿತ್ರೀಕರಿಸಿ ತಂದ...

0 Comments

Leave a Reply

This site uses Akismet to reduce spam. Learn how your comment data is processed.

%d bloggers like this: